ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ 'ಉತ್ತಮ ಕಾರ್ಯನಿರ್ವಹಣೆಯ ಸಚಿವ'ರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊರ ಹೊಮ್ಮಿದ್ದಾರೆ. ರಕ್ಷಣಾ ಸಚಿವರ ಕಾರ್ಯಕ್ಕೆ ಬಿಜೆಪಿ ಅಲ್ಲದೇ ವಿಪಕ್ಷ ಸದಸ್ಯರೂ ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಎನ್ಡಿಎ ಸದಸ್ಯರಲ್ಲಿ ಪ್ರಭಾವಿ ಸಚಿವರಾಗಿದ್ದರೆ, ವಿಪಕ್ಷಗಳ ಮನಗೆಲ್ಲುವಲ್ಲಿ ಶಾ ಸೋತು ಕೊನೆ ಸ್ಥಾನ ಪಡೆದಿದ್ದಾರೆ.
ಮೋದಿ ನೇತೃತ್ವದ ಎನ್ಡಿಎ ಸರ್ಕಾರ 8 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಖಾಸಗಿ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸಮೀಕ್ಷೆಯ ಪ್ರಕಾರ, ರಾಜನಾಥ್ ಸಿಂಗ್ರ ಕಾರ್ಯವೈಖರಿಗೆ ಪ್ರತಿಪಕ್ಷಗಳೂ ಫಿದಾ ಆಗಿವೆ. ಹೀಗಾಗಿ, ಅವರು ಮೋದಿ ಸಂಪುಟದ ಜನಪ್ರಿಯ ಮತ್ತು ಉತ್ತಮ ಕೆಲಸಗಾರ ಎಂಬ ಪಟ್ಟ ಪಡೆದಿದ್ದಾರೆ. ಎನ್ಡಿಎ ಮತದಾರರು 8.36 ಅಂಕಗಗಳ್ನು ನೀಡಿದರೆ, ವಿರೋಧ ಪಕ್ಷದವರು 7.03 ಅಂಕಗಳನ್ನು ನೀಡಿದ್ದಾರೆ.
ಜನಪ್ರಿಯತೆಯಲ್ಲೂ ಮೊದಲು :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೆಲಸದಲ್ಲೂ ಮಾತ್ರವಲ್ಲದೇ, ಜನಪ್ರಿಯತೆಯಲ್ಲೂ ಹಿಂದೆ ಬಿದ್ದಿಲ್ಲ. 18 ರಿಂದ 24 ವರ್ಷ ಮತ್ತು 55 ಪ್ಲಸ್ ವರ್ಷ ವಯಸ್ಸಿನ ಕೋಟಾದಲ್ಲೂ ಜನಪ್ರಿಯ ಸಚಿವರಾಗಿದ್ದಾರೆ. 18 ರಿಂದ 24 ವರ್ಷದ ವಯಸ್ಕರೂ ಕೂಡ ರಾಜನಾಥ್ ಸಿಂಗ್ರಿಗೆ 7.34 ಅಂಕಗಳನ್ನು ನೀಡಿದ್ದು, ಈ ಕೋಟಾದಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಇದಲ್ಲದೇ, 55 ಪ್ಲಸ್ ವಯಸ್ಸಿನವರೂ ಕೂಡ 7.72 ಅಂಕಗಳನ್ನು ನೀಡಿದ್ದಾರೆ.