ನವದೆಹಲಿ:ಜಮ್ಮು ಮತ್ತು ಕಾಶ್ಮೀರಲ್ಲಿ ಇತ್ತೀಚಿನ ದಿನಗಳಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಹಲವಾರು ಉದ್ದೇಶಿತ ಹತ್ಯೆಗಳು ನಡೆಯುತ್ತಿವೆ. ಹೀಗಾಗಿ ಅಲ್ಲಿನ ಭದ್ರತಾ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳ ಮುಖ್ಯಸ್ಥರನ್ನೊಳಗೊಂಡ ಉನ್ನತ ಮಟ್ಟದ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಎರಡು ವರ್ಷಗಳ ನಂತರ ಜೂನ್ 30ರಿಂದ ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯ ಸಿದ್ಧತೆಯ ಬಗ್ಗೆ ಚರ್ಚೆ ನಡೆಸಲಾಗಿದೆ.
ಮೇ 12 ರಂದು ಸರ್ಕಾರಿ ನೌಕರ ರಾಹುಲ್ ಭಟ್ ಅವರನ್ನು ಬುದ್ಗಾಮ್ ಜಿಲ್ಲೆಯ ಅವರ ಕಚೇರಿಯಲ್ಲಿ ಭಯೋತ್ಪಾದಕರು ಕೊಂದಿದ್ದರು. ಇದಾದ ಒಂದು ದಿನದ ನಂತರ, ಪೊಲೀಸ್ ಪೇದೆ ರಿಯಾಜ್ ಅಹ್ಮದ್ ಥೋಕರ್ ಎಂಬುವರನ್ನು ಪುಲ್ವಾಮಾ ಜಿಲ್ಲೆಯ ಅವರ ನಿವಾಸದಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಕಳೆದ ವಾರ, ಜಮ್ಮುವಿನ ಕತ್ರಾ ಬಳಿ ಪ್ರಯಾಣಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಯಾತ್ರಿಕರು ಮೃತಪಟ್ಟು, ಕನಿಷ್ಠ 20 ಮಂದಿ ಗಾಯಗೊಂಡಿದ್ದರು. ಈ ಎಲ್ಲಾ ಘಟನೆಗಳ ಬಳಿಕ ಅಮಿತ್ ಶಾ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.