ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಅಯೋಧ್ಯೆ ಸದರ್ ಅಸೆಂಬ್ಲಿ ಸ್ಥಾನದಲ್ಲಿರುವ ಜಿಐಸಿ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡುವರು.
ಬೆಳಗ್ಗೆ 10:15ಕ್ಕೆ ಅಯೋಧ್ಯೆಯ ಹನುಮಾನ್ ದೇವಸ್ಥಾನಕ್ಕೆ ಶಾ ಭೇಟಿ ನೀಡಲಿದ್ದಾರೆ. ಇದಾದ ಬಳಿಕ 10.30ಕ್ಕೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಭೇಟಿ ಕೊಡುವರು. ಮಧ್ಯಾಹ್ನ ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಅಧಿಕೃತ ಟ್ವಿಟರ್ನಲ್ಲಿ ತಿಳಿಸಲಾಗಿದೆ.
ಇದಾದ ಬಳಿಕ, ಕೇಂದ್ರ ಗೃಹ ಸಚಿವರು ಮಧ್ಯಾಹ್ನ 2 ಗಂಟೆಗೆ ಗೋರಖಾಪುರದ ಸಂತ ಕಬೀರ್ ನಗರದಲ್ಲಿ ಸಾರ್ವಜನಿಕ ಸಭೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಸಂಜೆ 4 ಗಂಟೆಗೆ ಬರೇಲಿಯಲ್ಲಿ ರೋಡ್ ಶೋ ನಡೆಸಲಿದ್ದು, ಸಂಜೆ 7 ಗಂಟೆಗೆ ಬರೇಲಿಯಲ್ಲಿ ಸಾಂಸ್ಥಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನ ಅಮಿತ್ ಶಾ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಅದೇ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ (ಎಸ್ಪಿ) 47 ಸ್ಥಾನಗಳು, ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) 19 ಸ್ಥಾನಗಳು ಹಾಗೂ ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು.
ಇದನ್ನೂ ಓದಿ:ಅರುಣಾಚಲ ಪ್ರದೇಶದ 15 ಸ್ಥಳಗಳಿಗೆ ಚೀನಾ ಮರುನಾಮಕರಣ: ಸತ್ಯವನ್ನು ಬದಲಾಯಿಸಲಾಗದು- ಭಾರತ