ಜೈಪುರ (ರಾಜಸ್ಥಾನ):ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷ ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್ 'ಸನಾತನ ಧರ್ಮ ಸೊಳ್ಳೆ, ಡೆಂಗ್ಯೂ, ಪ್ಲೂ, ಮಲೇರಿಯಾ ಇದ್ದ ಹಾಗೆ' ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಬಿಜೆಪಿಗೆ ಪ್ರಬಲ ಟೀಕಾಸ್ತ್ರ ನೀಡಿದಂತಾಗಿದ್ದು, ಇಂಡಿಯಾ ಮೈತ್ರಿಕೂಟ ಸನಾತನ ಧರ್ಮದ ವಿರುದ್ಧವಾಗಿದೆ. ಕಾಂಗ್ರೆಸ್ ಸೇರಿದಂತೆ ಅದರ ಮಿತ್ರ ಪಕ್ಷಗಳು ಹಿಂದು ಧರ್ಮವನ್ನು ಪದೆ ಪದೇ ಅವಮಾನಿಸುತ್ತಿವೆ ಎಂದು ಕಿಡಿಕಾರಿದೆ.
ಚುನಾವಣಾ ರಾಜ್ಯವಾದ ರಾಜಸ್ಥಾನದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ವಿಪಕ್ಷಗಳ ಮೈತ್ರಿಕೂಟ ಸನಾತನ ಧರ್ಮವನ್ನು ಅವಮಾನಿಸುತ್ತಿದೆ. ಕೇವಲ ವೋಟಿಗಾಗಿ ಪವಿತ್ರ ಧರ್ಮವನ್ನೇ ಕೊನೆಗಾಣಿಸುವ ಮಾತನ್ನಾಡುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ್ದಾರೆ.
ವೋಟಿಗಾಗಿ ಸನಾತನಕ್ಕೆ ಅವಮಾನ:ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿರುವ 'ಪರಿವರ್ತನ್ ಸಂಕಲ್ಪ ಯಾತ್ರೆ'ಯಲ್ಲಿ ತಮಿಳುನಾಡು ಸಚಿವ ಉದಯ್ನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿದ ಶಾ, ಇಂಡಿಯಾ ಮೈತ್ರಿಕೂಟವು ಸನಾತನ ಧರ್ಮವನ್ನು ಅವಮಾನಿಸುತ್ತಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ಕೊನೆಗಾಣಿಸುವುದಾಗಿ ಹೇಳುತ್ತಿದ್ದಾರೆ. ಅವರು ನಮ್ಮ 'ಸನಾತನ'ವನ್ನು ಅವಮಾನಿಸುತ್ತಿರುವುದು ಇದೇ ಮೊದಲಲ್ಲ ಎಂದು ಟೀಕಿಸಿದರು.