ಕೋಲ್ಕತ್ತಾ:ನ್ಯಾಯಾಂಗ ಬಂಧನದಲ್ಲಿದ್ದಾಗ ಕೊಲ್ಲಲ್ಪಟ್ಟರು ಎಂದು ಹೇಳಲಾದ ಕಾರ್ಯಕರ್ತರ ಕುಟುಂಬ ಸದಸ್ಯರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಭೇಟಿಯಾಗಿದ್ದಾರೆ,
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 26 ರಂದು ಪುರ್ಬಾ ಮದಿನಿಪುರ ಜಿಲ್ಲೆಯ ಪತಾಶ್ಪುರದಲ್ಲಿ ಬಿಜೆಪಿ ಕಾರ್ಯಕರ್ತ ಮದನ್ ಘೋರೈ ಅವರನ್ನು ಬಂಧಿಸಲಾಗಿತ್ತು. ಅವರು ಅಕ್ಟೋಬರ್ 13 ರಂದು ನಿಧನರಾದರು.
ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ಹಿರಿಯ ಬಿಜೆಪಿ ನಾಯಕರೊಂದಿಗೆ ಘೋರೈ ಅವರ ಕುಟುಂಬ ಸದಸ್ಯರು ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದರು.
"ಘೋರೈ ಅವರ ಮೃತದೇಹವನ್ನು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿದ ನಂತರ ಬೆದರಿಕೆಗಳು ಬರುತ್ತಿವೆ ಮತ್ತು ಕುಟುಂಬದ ಬಗ್ಗೆ ರಾಜ್ಯ ಸರ್ಕಾರದ ಉದಾಸೀನತೆ ತೋರುತ್ತಿದೆ ಎಂದು ಕುಟುಂಬಸ್ಥರು ದೂರಿದ್ದಾರೆ" ಎಂದು ಬಿಜೆಪಿ ಹೇಳಿದೆ.
"ಕೋಲ್ಕತ್ತಾದಲ್ಲಿ ಹುತಾತ್ಮನಾದ ನಮ್ಮ ಪಕ್ಷದ ಬೂತ್ ಉಪಾಧ್ಯಕ್ಷ ಮದನ್ ಘೋರೈ ಅವರ ಕುಟುಂಬವನ್ನು ಭೇಟಿಯಾದೆ. ಧೈರ್ಯಶಾಲಿ ಕುಟುಂಬಕ್ಕೆ ನಾನು ನಮಸ್ಕರಿಸುತ್ತೇನೆ. ಪಶ್ಚಿಮ ಬಂಗಾಳದಲ್ಲಿ ನಡೆದ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ಹೋರಾಡುವಾಗ ತ್ಯಾಗ ಮಾಡಿದ ನಮ್ಮ ಕಾರ್ಯಕರ್ತರಿಗೆ ಬಿಜೆಪಿ ಯಾವಾಗಲೂ ಋಣಿಯಾಗಿರುತ್ತದೆ" ಎಂದು ಕುಟುಂಬವನ್ನು ಭೇಟಿಯಾದ ನಂತರ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಚಿತ್ರಹಿಂಸೆಯಿಂದ ತನ್ನ ಅಣ್ಣ ಸಾವಿಗೀಡಾಗಿದ್ದಾನೆ ಎಂದು ಮದನ್ ಘೋರೈ ಸಹೋದರ ಆರೋಪಿಸಿದ್ದು, ಎರಡನೇ ಬಾರಿ ಮರಣೋತ್ತರ ಪರೀಕ್ಷೆಯನ್ನು ನಡೆಸಬೇಕೆಂದು ಕೋಲ್ಕತ್ತಾ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.