ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಮಾತೆ ಶಾರದಾ ದೇವಿ ದೇವಸ್ಥಾನವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದೇವಾಲಯ ಉದ್ಘಾಟನೆ ನಂತರ ಮಾತನಾಡಿದ ಶಾ, "ಮಾತೆ ಶಾರದೆಯ ಮಂದಿರ ಉದ್ಘಾಟನೆ ಕಾರ್ಯವು ಹೊಸ ಯುಗಕ್ಕೆ ನಾಂದಿಯಾಗಿದೆ. ಶಾರದಾ ಪೀಠದ ಆಶ್ರಯದಲ್ಲಿ ಪೌರಾಣಿಕ ಗ್ರಂಥಗಳ ಪ್ರಕಾರ ಈ ದೇವಾಲಯದ ವಾಸ್ತುಶಿಲ್ಪ ಮತ್ತು ನಿರ್ಮಾಣವನ್ನು ಮಾಡಲಾಗಿದೆ. ಶೃಂಗೇರಿ ಮಠದಿಂದ ಕೊಡುಗೆಯಾಗಿ ನೀಡಿದ ಶಾರದಾ ಮಾತೆಯ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಇದು ಭಕ್ತರಿಗೆ ಮಂಗಳಕರ ಸಂಕೇತವಾಗಿದೆ" ಎಂದರು.
"ಒಂದು ಕಾಲದಲ್ಲಿ ಶಾರದಾ ಪೀಠವನ್ನು ಭಾರತೀಯ ಉಪಖಂಡದಲ್ಲಿ ಜ್ಞಾನದ ಕೇಂದ್ರವೆಂದು ಪರಿಗಣಿಸಲಾಗಿತ್ತು. ದೇಶಾದ್ಯಂತ ವಿದ್ವಾಂಸರು ಧರ್ಮಗ್ರಂಥಗಳು ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಹುಡುಕಲು ಇಲ್ಲಿಗೆ ಬರುತ್ತಿದ್ದರು. ಇದು ದೇಶದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪರಂಪರೆಯ ಐತಿಹಾಸಿಕ ಕೇಂದ್ರವಾಗಿದೆ. ಶಾರದಾ ಲಿಪಿಯು ಕಾಶ್ಮೀರದ ಮೂಲ ಲಿಪಿಯಾಗಿದ್ದು, ಇದನ್ನು ಮಾ ಶಾರದಾ ಎಂದು ಹೆಸರಿಸಲಾಗಿದೆ. ಇದು ಮಹಾಶಕ್ತಿ ಪೀಠಗಳಲ್ಲಿ ಒಂದಾಗಿದೆ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಮಾತೆ ಸತಿಯ ಬಲಗೈ ಇಲ್ಲಿ ಬಿದ್ದಿದೆ ಎಂಬ ನಂಬಿಕೆ ಇದೆ" ಎಂದು ಅವರು ಹೇಳಿದರು.
ಇದನ್ನೂ ಓದಿ:76 ವರ್ಷದ ಬಳಿಕ ಭಾರತ-ಪಾಕ್ ಗಡಿ ರೇಖೆ ಬಳಿ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ರವೀಂದರ್ ರೈನಾ, "ಅವಿಭಜಿತ ಭಾರತದ ಮುಜಫರಾಬಾದ್‌ನಲ್ಲಿ ಮಾತೆ ಶಾರದಾ ದೇವಿ ಅವರ ಮಠವಿತ್ತು, ಪ್ರಪಂಚಾದ್ಯಂತ ಜನರು ಅಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಆದ್ರೆ, ಸಂಸ್ಕೃತ, ವೇದ ಮತ್ತು ಶಾಸ್ತ್ರಗಳು ವಿಭಜನೆಯಾದಾಗ ಮಠ ನಾಶವಾಯಿತು. ಇದೀಗ, 70 - 75 ವರ್ಷಗಳ ಬಳಿಕ ಮತ್ತೆ ದೇವಿಯ ದೇವಾಲಯವನ್ನು ಕಾಶ್ಮೀರದ ಕಿಶನ್‌ಗಂಗಾ ಕರಾವಳಿಯಲ್ಲಿರುವ ಟೀಟ್ವಾಲ್‌ನಲ್ಲಿ ಉದ್ಘಾಟಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ: ಶೃಂಗೇರಿ ಪೀಠದಿಂದ ಮೃತ್ತಿಕೆ ಹಸ್ತಾಂತರ
ಶಾರದಾ ಪೀಠದ ಇತಿಹಾಸ:ಒಂದು ಕಾಲದಲ್ಲಿ ಹಿಂದೂ ಮತ್ತು ಬೌದ್ಧರ ಅಧ್ಯಯನದ ಸ್ಥಳವಾಗಿದ್ದ ಕಾಶ್ಮೀರದ ಶಾರದಾಪೀಠವು ಉನ್ನತ ಕಲಿಕೆಯ ಕೇಂದ್ರವಾಗಿತ್ತು. ದೇಶ ಮಾತ್ರವಲ್ಲದೇ, ಮಧ್ಯ ಏಷ್ಯಾದಿಂದಲೂ ಅನೇಕ ಮಂದಿ ವಿದ್ವಾಂಸರುಗಳು ಇಲ್ಲಿಗೆ ಬರುತ್ತಿದ್ದರು. ಅಶೋಕ ಚಕ್ರವರ್ತಿಯ ಆಳ್ವಿಕೆಯ ಕಾಲದಿಂದ ರಾಜ ಲಲಿತಾದಿತ್ಯನವರೆಗೆ ಇಲ್ಲಿ ಬೌದ್ಧ ಧರ್ಮ ಪ್ರಾಬಲ್ಯ ಹೊಂದಿತ್ತು. ಆದ್ರೆ, 1947 ರಲ್ಲಿ ಕಿಶನ್‌ಗಂಗಾ ನದಿಯ ದಡದಲ್ಲಿರುವ ಮೂಲ ದೇವಾಲಯ ಮತ್ತು ಅದರ ಪಕ್ಕದಲ್ಲಿದ್ದ ಗುರುದ್ವಾರವನ್ನು ಬುಡಕಟ್ಟು ದಾಳಿಕೋರರು ನಾಶಪಡಿಸಿದ್ದರು. ಕಳೆದ 20 ವರ್ಷಗಳ ಸತತ ಶ್ರಮದ ಫಲವಾಗಿ ಇದೀಗ ಮತ್ತೆ ಶಾರದಾ ಪೀಠ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸಹ ಅನುಮತಿ ನೀಡಿದೆ.