ನವದೆಹಲಿ :ಛತ್ತೀಸ್‌ಗಢದಲ್ಲಿ ನಡೆದ ನಕ್ಸಲ್ ದಾಳಿ ಹಿನ್ನೆಲೆ ಅಸ್ಸೋಂ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರ ಮೊಟಕುಗೊಳಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಗೆ ತೆರಳಿದ್ದಾರೆ.
ಅಸ್ಸೋಂನಲ್ಲಿಂದು ಮೂರು ಚುನಾವಣಾ ರ‍್ಯಾಲಿಗಳಲ್ಲಿ ಅಮಿತ್ ಶಾ ಪಾಲ್ಗೊಳ್ಳಬೇಕಿತ್ತು. ಆದರೆ, ಛತ್ತೀಸ್‌ಗಢದಲ್ಲಿನ ನಕ್ಸಲರ ದಾಳಿ ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿಗೆ ಮರಳಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಅಸ್ಸೋಂ ಚುನಾವಣೆಯ ಸಹ ಉಸ್ತುವರಿ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಛತ್ತೀಸ್‌ಗಢದ ಸುಕ್ಮಾ-ಬಿಜಾಪುರ್ ಪ್ರದೇಶದಲ್ಲಿ ನಿನ್ನೆಯಿಂದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. 31 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಇವರಲ್ಲಿ 16 ಮಂದಿ ಸಿಆರ್‌ಪಿಎಫ್ ಯೋಧರಾಗಿದ್ದಾರೆ. 9 ಮಂದಿ ನಕ್ಸಲರನ್ನು ಸದೆಬಡಿಯಲಾಗಿದೆ.