ಮಧುರೈ (ತಮಿಳುನಾಡು): ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು (ಶುಕ್ರವಾರ) ಮಧುರೈಗೆ ಭೇಟಿ ನೀಡಿದ್ದಾರೆ. ಭಾರತಿಯ ಜನತಾ ಪಕ್ಷದಿಂದ 'ಎನ್ ಮಣ್, ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಎಂಬ ಆರು ತಿಂಗಳ ಸುದೀರ್ಘ ಪಾದಯಾತ್ರೆ ನಡೆಯಲಿದ್ದು ರಾಮೇಶ್ವರಂ ಪಟ್ಟಣದಲ್ಲಿ ಈ ಪಾದಯಾತ್ರೆಗೆ ಚಾಲನೆ ನೀಡಿದರು. 2024ರ ಲೋಕಸಭಾ ಚುನಾವಣಾ ದೃಷ್ಟಿಯಿಂದ ಈ ಪಾದಯಾತ್ರೆ ನಡೆಯಲಿದೆ.
ರಾಮೇಶ್ವರಂನಿಂದ ಪ್ರಾರಂಭವಾಗುವ ಈ ಪಾದಯಾತ್ರೆ ರಾಜ್ಯಾದ್ಯಂತ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾಗಲಿದೆ. ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಜನವರಿ 11 ರಂದು ಈ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಯಾತ್ರೆಯ ನೇತೃತ್ವ ವಹಿಸಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಈ ಹಿಂದೆಯೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು. ಅದರಂತೆ ಇಂದು ಶಾ ಅವರು ಇಂದು ರಾಮೇಶ್ವರಂ ಬಸ್ ನಿಲ್ದಾಣದ ಎದುರಿನ ಮೈದಾನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು.
ರಾಮೇಶ್ವರಂ ತಲುಪುವುದಕ್ಕೂ ಮುನ್ನ ಟ್ವಿಟ್ ಮಾಡಿರುವ ಶಾ, ''ನಾನು ತಮಿಳುನಾಡಿನ ರಾಮೇಶ್ವರಂಗೆ ಹೊರಟೆ. ಇಂದು ತಮಿಳುನಾಡು ಬಿಜೆಪಿ ಆಯೋಜಿಸಿರುವ 'ಎನ್ ಮಣ್ ಎನ್ ಮಕ್ಕಳ್' (ನನ್ನ ಭೂಮಿ, ನನ್ನ ಜನರು) ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಇದು ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟಿರುವ ಬದಲಾವಣೆ ಸಂದೇಶವನ್ನು ಸಾರುತ್ತದೆ'' ಎಂದು ಪೋಸ್ಟ್ ಮಾಡಿದ್ದಾರೆ.
"ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಇಂದಿನ ಕಾರ್ಯಕ್ರಮ ಕುರಿತು ಮಾತನಾಡಿದ್ದ ಅಣ್ಣಾಮಲೈ, ನನ್ನ ಮಣ್ಣು ನನ್ನ ಜನ ಯಾತ್ರೆ ಮೂಲಕ ನಾವೆಲ್ಲರೂ ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿ 168 ದಿನಗಳ ಸುದೀರ್ಘ ಪ್ರಯಾಣ ನಡೆಸಲಿದ್ದೇವೆ. ಪ್ರತಿಯೊಬ್ಬರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸುತ್ತಿದ್ದೇವೆ. ಪ್ರಧಾನಿ ಮೋದಿಯವರಿಗೆ ಶುಭ ಸಂದೇಶ ತೆಗೆದುಹೋಗಲಿದ್ದೇವೆ. ಯಾತ್ರೆ ವೇಳೆ ಯೋಜಿಸಲಾಗಿರುವ 10 ಪ್ರಮುಖ ಸಭೆಯಲ್ಲಿ ಕನಿಷ್ಠ ಒಬ್ಬ ಕೇಂದ್ರ ಸಚಿವರು ಭಾಷಣ ಮಾಡಲಿದ್ದಾರೆ ಎಂದು ಹೇಳಿದ್ದರು.
ಯಾತ್ರೆಯು 1068 ಕಿಮೀ ಕಾಲ್ನಡಿಗೆಯಲ್ಲಿ ಮತ್ತು ಉಳಿದ ಪ್ರದೇಶವನ್ನು ತೆರೆದ ವಾಹನದ ಮೂಲಕ ಕ್ರಮಿಸುವ ಗುರಿಯನ್ನು ಹೊಂದಿದೆ. ರಾಜ್ಯದಲ್ಲಿ ಮಿತಿಮೀರಿದ ದುರಾಡಳಿಕ್ಕೆ ಈ ಮೂಲಕ ಕೊನೆ ಹಾಡಬೇಕಿದೆ. ರಾಜ್ಯದ ಜನರು ತುಂಬಾ ಸ್ಪಷ್ಟವಾಗಿದ್ದಾರೆ. ಕೆಲವು ವಿರೋಧಿ ಶಕ್ತಿಗಳು ತಮಿಳು ಸಂಸ್ಕೃತಿ ವಿರುದ್ಧ ಹೊರಟಿವೆ. ನಮ್ಮ ಅಮೂಲ್ಯ ಸಂಸ್ಕೃತಿ ಮತ್ತು ಸಂಪನ್ಮೂಲಗಳನ್ನು ಲಪಟಾಯಿಸಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದರು.
ಇಂದಿನ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ತಮಿಳು ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಿ.ಕೆ.ವಾಸನ್, ಹೊಸ ತಮಿಳುನಾಡು ಪಕ್ಷದ ಅಧ್ಯಕ್ಷ ಕೃಷ್ಣಸಾಮಿ, ತಮಿಳುನಾಡು ಪೀಪಲ್ಸ್ ಡೆವಲಪ್‌ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಾನ್ ಪಾಂಡಿಯನ್ ಸೇರಿದಂತೆ ಹಲವರು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ರಾಮೇಶ್ವರಂನಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ರಾಜ್ಕೋಟ್ ವಿಮಾನ ನಿಲ್ದಾಣದ ಗ್ರೀನ್ ಫೀಲ್ಡ್ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ: ವಿಡಿಯೋ