ಫರಿದಾಬಾದ್ (ಹರಿಯಾಣ):ಭಯೋತ್ಪಾದನೆ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಹರಿಯಾಣದ ಫರಿದಾಬಾದ್ನಲ್ಲಿ ಗುರುವಾರದಿಂದ ಶುರುವಾದ ಮುಖ್ಯಮಂತ್ರಿಗಳು ಮತ್ತು ರಾಜ್ಯಗಳ ಗೃಹ ಮಂತ್ರಿಗಳ 2 ದಿನಗಳ ಚಿಂತನಾ ಶಿಬಿರದಲ್ಲಿ ಅವರು ಮಾತನಾಡಿದರು.
ಭಾರತದ ಆಂತರಿಕ ಭದ್ರತೆಯ ಬಗ್ಗೆ ಎಳೆಎಳೆಯಾಗಿ ಮಾತನಾಡಿದ ಅಮಿತ್ ಶಾ, ಎಲ್ಲಾ ರಾಜ್ಯಗಳು ಒಗ್ಗೂಡಿ ಉಗ್ರ ಚಟುವಟಿಕೆಗಳ ವಿರುದ್ಧ ಹೋರಾಡಬೇಕಿದೆ. ಎನ್ಐಎ ಭಯೋತ್ಪಾದಕ ಪ್ರಕರಣಗಳನ್ನು ಚೆಂಡಾಡುತ್ತಿದೆ. ಆ ಸಂಸ್ಥೆಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ. ಉಗ್ರವಾದದ ನಾಶಕ್ಕಾಗಿ 2024 ರ ವೇಳೆಗೆ ಎಲ್ಲ ರಾಜ್ಯಗಳಲ್ಲಿ ತನಿಖಾ ಸಂಸ್ಥೆಯ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಅಭಿವೃದ್ಧಿಗೆ ಅಕ್ರಮ ಎನ್ಜಿಒಗಳು ಅಡ್ಡಿ:ದೇಶದ ಬೆಳವಣಿಗೆಗೆ ಅಡೆತಡೆ ಒಡ್ಡುತ್ತಿರುವ ಎನ್‌ಜಿಒಗಳ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಹಲವು ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯನ್ನು ರದ್ದುಗೊಳಿಸಲಾಗಿದೆ. ಇವುಗಳು ಧಾರ್ಮಿಕ ಮತಾಂತರದಲ್ಲಿ ತೊಡಗಿವೆ. ಈ ನಡೆ ರಾಷ್ಟ್ರದ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಎಂದರು.