ಮೀರತ್ (ಉತ್ತರಪ್ರದೇಶ):ಜೀವನದಲ್ಲಿ ಯಾವುದೇ ಕಷ್ಟದ ಸಂದರ್ಭಗಳನ್ನು ಎದುರಿಸಲು ನಾವು ಮೊದಲು ನಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಬೇಕು. ನಮ್ಮ ಮೇಲಿನ ನಂಬಿಕೆ, ನಮ್ಮ ಧೈರ್ಯ ಒಂದಲ್ಲ ಒಂದು ದಿನ ನಮ್ಮನ್ನು ಕಾಪಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಉತ್ತರಪ್ರದೇಶದ ಮೀರತ್ನ ಯುವಕನೋರ್ವನ ಕಥೆ.
ಮೀರತ್ನ ಅಮಿತ್ ಚೌಧರಿ ಎಂಬ ಯುವಕ ಇಂದು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ಇವರು ತಮ್ಮ ಮೇಲೆ ಬಂದ ಸುಳ್ಳು ಕೊಲೆ ಆರೋಪವನ್ನು ಸ್ವತಃ ಕೋರ್ಟ್ನಲ್ಲಿ ವಾದಿಸಿ ಇಂದು ನಿರಪರಾಧಿ ಎಂದು ಸಾಬೀತುಪಡಿಸಿಕೊಂಡಿದ್ದಾರೆ. ಈ ಮೂಲಕ ಬೇರೆಯವರು ತಮ್ಮ ಮೇಲೆ ಇಡುವ ನಂಬಿಕೆಗಿಂತ ನಾವು ನಮ್ಮ ಮೇಲೆ ಇಟ್ಟುಕೊಳ್ಳುವ ನಂಬಿಕೆ ತುಂಬಾ ಮುಖ್ಯವಾದುದು ಎಂದು ಸಾಬೀತುಪಡಿಸಿದ್ದಾರೆ.
ಕೊಲೆ ಪ್ರಕರಣದಿಂದ ಬದಲಾದ ಅಮಿತ್ ಜೀವನ: ಅಮಿತ್ ಅವರು ಮೂಲತಃ ಬಾಗ್ಪತ್ನ ಕಿರ್ಟಲ್ ನಿವಾಸಿಯಾಗಿದ್ದಾರೆ. 2011ರ ಅಕ್ಟೋಬರ್ 12ರಂದು ಸುಮಿತ್ ಕೈಲ್ ಎಂಬ ದುಷ್ಕರ್ಮಿ ಇಲ್ಲಿನ ಥಾಣಾ ಭವನ್ನ ಮಸ್ತ್ ಭವನ್ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದನು. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಈ ವೇಳೆ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಪ್ರಕರಣ ನಡೆದ ಸ್ಥಳವನ್ನು ಸಂಪೂರ್ಣ ಸೀಲ್ಡೌನ್ ಮಾಡಿತ್ತು. ಈ ಸಂಬಂಧ 17 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಕೆಲವು ಅಮಾಯಕರನ್ನು ಬಂಧಿಸಿದ್ದು, ಈ ವೇಳೆ ಅಮಿತ್ ಅವರನ್ನು ಪೊಲೀಸರು ಬಂಧಿಸಿದ್ದರು.
ಆಗ ಅಮಿತ್ ಅವರಿಗೆ ಸುಮಾರು 18 ವರ್ಷ ವಯಸ್ಸು. ಈ ಸಂದರ್ಭದಲ್ಲಿ ಅಮಿತ್ ಬಿಎ ವ್ಯಾಸಂಗ ಮಾಡುತ್ತಿದ್ದರು. ಅಲ್ಲದೆ ತನ್ನ ಬಿಎ ವ್ಯಾಸಂಗದ ಬಳಿಕ ಭಾರತೀಯ ಸೇನೆ ಸೇರುವ ಬಗ್ಗೆ ಕನಸು ಕಾಣುತ್ತಿದ್ದರು. ಆದರೆ ಈ ಒಂದು ಘಟನೆ ಅವರ ಕನಸನ್ನು ನುಚ್ಚುನೂರು ಮಾಡಿತ್ತು. ಈ ಪ್ರಕರಣ ನಡೆಯುವಾಗ ಅಮಿತ್ ಇಲ್ಲಿಯೇ ಇದ್ದ ತನ್ನ ಸಂಬಂಧಿಕರ ಮನೆಗೆ ತೆರಳಿದ್ದರು. ಸೀಲ್ ಡೌನ್ ಮಾಡಿದ ಬಳಿಕ ಪೊಲೀಸರು ಸ್ಥಳದಲ್ಲಿದ್ದ ಅಮಿತ್ನನ್ನು ಬಂಧಿಸಿದ್ದರು. ತಾನು ನಿರಪರಾಧಿ ಎಂದು ಗೋಗರೆದರೂ ಯಾರೂ ಕೇಳಿರಲಿಲ್ಲ. ಈತನ ಮೇಲೆ ಪೊಲೀಸ್ ಪೇದೆಯ ಹತ್ಯೆಯ ಆರೋಪವನ್ನು ಮಾಡಲಾಗಿತ್ತು. ಆದರೆ ಇನ್ನೂ ಬಿಎ ವ್ಯಾಸಂಗ ಮಾಡುತ್ತಿದ್ದ ಯುವಕನಾಗಿದ್ದರಿಂದ ಏನಾಗುತ್ತಿದೆ ಎಂಬುದು ಅಮಿತ್ಗೆ ಅರ್ಥವಾಗಿರಲಿಲ್ಲ. ಇದರಿಂದಾಗಿ ಸೈನ್ಯ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ನುಚ್ಚುನೂರಾಗಿತ್ತು.