ಜಮ್ಮು ಕಾಶ್ಮೀರ:ಸತತ ಪರಿಶ್ರಮ, ಗುರಿ ಮುಟ್ಟುವ ಛಲವಿದ್ದವನಿಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬುದನ್ನು ಕುತ್ತಿಗೆಯ ಮೂಲಕ ಬ್ಯಾಟ್ ಬೀಸುವ, ಕಾಲಿನ ಮೂಲಕ ಬೌಲಿಂಗ್ ಮಾಡುವ ಕಾಶ್ಮೀರದ ಹುಡುಗ ಅಮೀರ್ ಸಾಧಿಸಿ ತೋರಿಸಿದ್ದಾನೆ.
ದಿವ್ಯಾಂಗ್ ಪ್ರೀಮಿಯರ್ ಲೀಗ್ಗೆ ಆಯ್ಕೆಯಾದ ಅಮೀರ್‌ಗೆ ಸನ್ಮಾನ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ನೆಲದಲ್ಲರಳಿದ ಅಪರೂಪದ ಪ್ರತಿಭೆ 27 ವರ್ಷದ ಅಮೀರ್, 'ದಿವ್ಯಾಂಗ್ ಪ್ರೀಮಿಯರ್ ಲೀಗ್'ಗೆ ಆಯ್ಕೆಯಾಗಿದ್ದಾರೆ. ಬಾಲ್ಯದಲ್ಲಿ ಜರುಗಿದ ಅಪಘಾತವೊಂದರಲ್ಲಿ ಈತ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ. ಆದರೆ ಇದು ಆತನ ಕ್ರಿಕೆಟರ್ ಆಗುವ ಆಸೆಯನ್ನು ಹತ್ತಿಕ್ಕಲಿಲ್ಲ. ಕೈ ಇಲ್ಲದಿದ್ದರೇನಂತೆ? ಕಾಲುಗಳಿವೆಯಲ್ಲಾ ಎಂದು ತನ್ನ ವಿಶ್ವಾಸ ಹೆಚ್ಚಿಸಿಕೊಂಡು, ಪಾದದ ಮೂಲಕ ಬೌಲಿಂಗ್ ಮಾಡುವ ಮೋಡಿಗೆ ಎಷ್ಟೋ ಸಲ ಬ್ಯಾಟ್ಸ್ಮನ್ಗಳೇ ವಿಚಲಿತರಾಗಿದ್ದುಂಟು!.
ಕಾಲುಗಳಲ್ಲೇ ಬೌಲಿಂಗ್ ಮಾಡುವ ಅಮೀರ್ ಬಟ್ಟೆಗಳನ್ನು ಬದಲಾಯಿಸುವುದರಿಂದ ಹಿಡಿದು ಊಟ ಮಾಡುವವರೆಗೂ ಅಮೀರ್ ತನ್ನೆಲ್ಲಾ ಕೆಲಸಗಳನ್ನು ಕಾಲುಗಳ ಮೂಲಕವೇ ಮಾಡುತ್ತಾನೆ. ಮೊದಲಿನಿಂದಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದ ಈ ಯುವಕ ಅಂಗವೈಕಲ್ಯವನ್ನು ತನ್ನ ಯಶಸ್ಸಿನ ಹಾದಿಯಲ್ಲಿ ಅಡ್ಡಿಯಾಗಲು ಬಿಟ್ಟಿಲ್ಲ.
ಕ್ರಿಕೆಟ್‌ನಲ್ಲಿ ಅಮೀರ್ ಆಲ್‌ರೌಂಡರ್. ಈತನ ವಿಶಿಷ್ಟ ರೀತಿಯ ಆಟ ನೋಡಲು ದೂರದ ಪ್ರದೇಶಗಳಿಂದ ಪ್ರೇಕ್ಷಕರು ಆಗಮಿಸುತ್ತಾರೆ. ಕುತ್ತಿಗೆಯಿಂದ ಬ್ಯಾಟ್ ನಿಭಾಯಿಸುವ ಮೂಲಕ ಈ ಯುವಕ ಅದ್ಭುತ ಪ್ರದರ್ಶನ ನೀಡಬಲ್ಲ. ಇದು ಸ್ಥಳೀಯ ಮತ್ತು ರಾಷ್ಟ್ರಮಟ್ಟದಲ್ಲಿ ಅಮೀರ್‌ಗೆ ಮೆಚ್ಚುಗೆ ತಂದುಕೊಟ್ಟಿದೆ.
ಜಮ್ಮು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡು ರಾಷ್ಟ್ರಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾನೆ. ಹೀಗಾಗಿ ಶಾರ್ಜಾದಲ್ಲಿ ಏಪ್ರಿಲ್ 8 ರಿಂದ ಏಪ್ರಿಲ್ 15 ರವರೆಗೆ ನಡೆಯಲಿರುವ ಭಾರತದ ದಿವ್ಯಾಂಗ್ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸಿರುವ ದಿವ್ಯಾಂಗ್ ಕ್ರಿಕೆಟ್ ಲೀಗ್ನಲ್ಲಿ ಆಡಲು ಅವಕಾಶ ಸಿಕ್ಕಿದೆ.
ಅಮೀರ್ ಸಾಧನೆ ಕಂಡು ಅವರ ಕುಟುಂಬವೂ ಸಂತಸಗೊಂಡಿದೆ. ತಾಯಿಯ ಖುಷಿಗಂತೂ ಪಾರವೇ ಇಲ್ಲ. ಮಗನಿಗೆ ಮತ್ತಷ್ಟು ಅವಕಾಶಗಳು ದೊರೆಯಲಿ, ಇನ್ನಷ್ಟು ಸಾಧನೆಗಳನ್ನು ಆತ ಮಾಡುವಂತಾಗಲಿ ಎಂದು ಆನಂದಬಾಷ್ಪ ತುಂಬಿದ ಕಣ್ಣುಗಳ ಮೂಲಕವೇ ಮಗನನ್ನು ಆಶೀರ್ವದಿಸುತ್ತಾರೆ.
ಇದನ್ನೂ ಓದಿ:ಜಾಗತಿಕ ಲಿಂಗ ಸಮಾನತೆಯಲ್ಲಿ ಈ ದೇಶಗಳಿಗಿಂತಲೂ ಹಿಂದಿದೆಯೇ ಭಾರತ?