ಹೈದರಾಬಾದ್, ತೆಲಂಗಾಣ :ತಮ್ಮ ವೈಎಸ್‌ಆರ್ ತೆಲಂಗಾಣ ಪಕ್ಷವನ್ನು (ವೈಎಸ್‌ಆರ್‌ಟಿಪಿ) ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯ ಬಗ್ಗೆ ಹೆಚ್ಚುತ್ತಿರುವ ಗದ್ದಲದ ನಡುವೆ, ಆಂಧ್ರ ಸಿಎಂ ಜಗನ್ ಸಹೋದರಿ ವೈಎಸ್ ಶರ್ಮಿಳಾ ಸೋಮವಾರ ರಾಹುಲ್ ಗಾಂಧಿ ಅವರ ಜನ್ಮದಿನಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
ವೈಎಸ್‌ಆರ್‌ಟಿಪಿ ನಾಯಕಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿ, ರಾಷ್ಟ್ರದ ಜನರ ಉದ್ದೇಶಕ್ಕಾಗಿ ಸಮರ್ಪಿತವಾದ ಅವರ ದಣಿವರಿಯದ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.
"ಶ್ರೀ ರಾಹುಲ್ ಗಾಂಧೀಜಿ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಪರಿಶ್ರಮ ಮತ್ತು ತಾಳ್ಮೆಯಿಂದ ಜನರನ್ನು ಪ್ರೇರೇಪಿಸುವುದನ್ನು ಮುಂದುವರಿಸಿ. ನಿಮ್ಮ ಪ್ರಾಮಾಣಿಕ ಪ್ರಯತ್ನಗಳ ಮೂಲಕ ಜನರ ಸೇವೆ ಸಾಗಲಿ. ನಿಮಗೆ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯಲ್ಲಿ ಯಶಸ್ಸು ಸಿಗಲಿ ಎಂದು ಶರ್ಮಿಳಾ ಟ್ವೀಟ್ ಮಾಡಿದ್ದಾರೆ.
ಈ ವರ್ಷದ ಕೊನೆಯಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಗೆ ಮುನ್ನ ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವ ಸಾಧ್ಯತೆಯ ಬಗ್ಗೆ ಹೆಚ್ಚುತ್ತಿರುವ ಗದ್ದಲ ನಡುವೆ ಹುಟ್ಟುಹಬ್ಬದ ಶುಭಾಶಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ವಿಲೀನ ಒಪ್ಪಂದಕ್ಕೆ ಶರ್ಮಿಳಾ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ. ವೈಎಸ್‌ಆರ್‌ಟಿಪಿ ನಾಯಕ, ಯುನೈಟೆಡ್ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ (ವೈಎಸ್‌ಆರ್) ಅವರ ಪುತ್ರಿ, ಪಕ್ಷವನ್ನು ವಿಲೀನಗೊಳಿಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಪ್ರತಿಯಾಗಿ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಆಕೆಗೆ ಮತ್ತು ಅವರ ಕೆಲವು ಆಪ್ತ ಬೆಂಬಲಿಗರಿಗೆ ಟಿಕೆಟ್ ನೀಡುತ್ತದೆ ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರು ಖಮ್ಮಂ ಜಿಲ್ಲೆಯ ಪಲೈರ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಇನ್ನೂ ಒಂದೆರಡು ವೈಎಸ್‌ಆರ್‌ಟಿಪಿ ನಾಯಕರಿಗೂ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆ. ನೆರೆ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಶರ್ಮಿಳಾ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಒಂದೆರಡು ಬಾರಿ ಭೇಟಿಯಾದರು. ಆಗ ವಿಲೀನ ಅಥವಾ ಸಂಭವನೀಯ ಮೈತ್ರಿಯ ಸೂಚನೆ ಅಲೆ ಎದ್ದಿತು.
ಮೇ 29 ರಂದು ಬೆಂಗಳೂರಿನಲ್ಲಿ ಇಬ್ಬರ ನಡುವೆ ಸಭೆ ನಡೆದಿತ್ತು. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಶಿವಕುಮಾರ್ ಅವರ ಪಾತ್ರವನ್ನು ಅವರು ಶ್ಲಾಘಿಸಿದರು. ಶಿವಕುಮಾರ್ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ತೆಲಂಗಾಣದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸುವ ಮತ್ತು ಹಿಂದೆ ಪಕ್ಷ ತೊರೆದ ನಾಯಕರನ್ನು ಮರಳಿ ಕರೆತರುವಲ್ಲಿ ಸಕ್ರಿಯ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ ಈ ಸಭೆ ಮಹತ್ವದ್ದಾಗಿತ್ತು.
ಶಿವಕುಮಾರ್ ಅವರು ದಿವಂಗತ ವೈಎಸ್ಆರ್ ಮತ್ತು ಅವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ತೆಲಂಗಾಣದ ಕಾಂಗ್ರೆಸ್ ನಾಯಕರು ಶರ್ಮಿಳಾ ಅವರೊಂದಿಗೆ ಕೈಜೋಡಿಸುವ ಸಾಧ್ಯತೆಯಿದೆ. ಮುಂಬರುವ ಚುನಾವಣೆಯಲ್ಲಿ ಕೆಸಿಆರ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯನ್ನು (ಬಿಆರ್‌ಎಸ್) ಸೋಲಿಸಲು ಯಾರೊಂದಿಗಾದರೂ ತಮ್ಮ ಪಕ್ಷವು ಮಾತುಕತೆಗೆ ಮುಕ್ತವಾಗಿದೆ ಎಂದು ಶರ್ಮಿಳಾ ಹೇಳಿದ್ದು ಗಮನಾರ್ಹ.
ಶರ್ಮಿಳಾ ಅವರು ತೆಲಂಗಾಣದಲ್ಲಿ 'ರಾಜಣ್ಣ ರಾಜ್ಯ'ವನ್ನು ಮರಳಿ ತರುವುದಾಗಿ ಭರವಸೆ ನೀಡಿ 2021ರಲ್ಲಿ ವೈಎಸ್‌ಆರ್‌ಟಿಪಿ ಆರಂಭಿಸಿದರು. 'ರಾಜಣ್ಣ ರಾಜ್ಯ' ಎಂಬುದು ವೈಎಸ್‌ಆರ್ ಆಳ್ವಿಕೆಯ ಸಂದರ್ಭದಲ್ಲಿ ರೈತರು ಮತ್ತು ಬಡವರಿಗಾಗಿ ಹಲವಾರು ಕ್ರಾಂತಿಕಾರಿ ಕಲ್ಯಾಣ ಕ್ರಮಗಳನ್ನು ಜಾರಿಗೆ ತಂದಿದೆ. ವೈಎಸ್ಆರ್ ಅವರು 2004 ರಿಂದ 2009 ರವರೆಗೆ ಅಖಂಡ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ಕೆಲವು ತಿಂಗಳ ನಂತರ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಜಗನ್ ಮೋಹನ್ ರೆಡ್ಡಿ ಅವರು ಕಾಂಗ್ರೆಸ್ ತೊರೆದು ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿದರು. ಆಗ ಶರ್ಮಿಳಾ ಮತ್ತು ಅವರ ತಾಯಿ ವಿಜಯಮ್ಮ ಅವರು ಜಗನ್ ಬೆಂಬಲಕ್ಕೆ ನಿಂತರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಜಗನ್ಗೆ ಶರ್ಮಿಳಾ ಬೆಂಬಲ ಸೂಚಿಸಲು ಪಾದಯಾತ್ರೆ ಕೈಗೊಂಡಿದ್ದರು. ಅವರು ಆಂಧ್ರಪ್ರದೇಶದಲ್ಲಿ 2014 ಮತ್ತು 2019 ರ ಚುನಾವಣೆಗಳಲ್ಲಿ YSRCP ಗಾಗಿ ಸಕ್ರಿಯವಾಗಿ ಪ್ರಚಾರ ಮಾಡಿದರು.
2019 ರಲ್ಲಿ ವೈಎಸ್‌ಆರ್‌ಸಿಪಿಯ ಪ್ರಚಂಡ ವಿಜಯದ ನಂತರ ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾದರು. ಬಳಿಕ ತನ್ನ ಸಹೋದರ ಜೊತೆ ಭಿನ್ನಾಭಿಪ್ರಾಯ ಮೂಡಿದ್ದು, ಆಗನಿಂದಲೂ ಶರ್ಮಿಳಾ ಅವರು ಪಕ್ಷದಿಂದ ದೂರವಿದ್ದರು. ಜಗನ್ ಮೋಹನ್ ರೆಡ್ಡಿ ತಮ್ಮ ಪಕ್ಷವನ್ನು ಆಂಧ್ರಪ್ರದೇಶಕ್ಕೆ ಸೀಮಿತಗೊಳಿಸಲು ನಿರ್ಧರಿಸಿದರೆ, ಶರ್ಮಿಳಾ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಟ್ಟುವ ಮೂಲಕ ತಮ್ಮದೇ ಆದ ಮಾರ್ಗವನ್ನು ರೂಪಿಸಿದರು. ಕೆಸಿಆರ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿಯಲು ತೆಲಂಗಾಣದಲ್ಲಿ ಪಾದಯಾತ್ರೆ ಕೈಗೊಂಡು ಸುಮಾರು 3,850 ಕಿ.ಮೀ ದೂರವನ್ನು ಕ್ರಮಿಸಿದ್ದರು.
ಓದಿ:ಡಿಸಿಎಂ ಡಿಕೆಶಿ ಭೇಟಿಯಾದ ಆಂಧ್ರ ಸಿಎಂ ಸಹೋದರಿ ವೈ.ಎಸ್.ಶರ್ಮಿಳಾ ರೆಡ್ಡಿ- ವಿಡಿಯೋ