ನವದೆಹಲಿ:ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಎರಡೂ ರಾಜ್ಯಗಳು ಗಡಿ ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ತಮಿಳುನಾಡು ಮತ್ತು ಕರ್ನಾಟಕದ ಆರೋಗ್ಯ ಸಚಿವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸೂಚನೆ ನೀಡಿದ್ದಾರೆ.
ಕೇರಳದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಶೇಕಡಾ 20ಕ್ಕಿಂತ ಹೆಚ್ಚಿದೆ. ಇದು ವೈರಸ್ ವೇಗವಾಗಿ ಹರಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಕಠಿಣ ಕ್ರಮಗಳನ್ನು ಮತ್ತು ಲಾಕ್‌ಡೌನ್ ಜಾರಿಗೊಳಿಸಲು ಸರ್ಕಾರಿ ಮೂಲಗಳು ಒತ್ತುನೀಡುತ್ತಿವೆ.
ಕೇರಳ ರಾಜ್ಯವು ದೇಶದಲ್ಲಿ ದಿನವೊಂದರಲ್ಲಿ ಒಟ್ಟು ಕಾಣಿಸಿಕೊಳ್ಳುವ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ಕೋವಿಡ್ ಪ್ರಕರಣಗಳನ್ನು ಹೊಂದಿದೆ. ಆದರೂ ಕೂಡಾ ಲಾಕ್‌ಡೌನ್ ಹೇರಲು ಮತ್ತು ಕೋವಿಡ್ ಹರಡುವಿಕೆ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ.