ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರದಲ್ಲಿ ಕ್ಷಿಪ್ತ ರಾಜಕೀಯ ಪಲ್ಲಟದ ನಂತರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮೇಲಿನ ಹಿಡಿತಕ್ಕಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಹಿರಿಯ ನಾಯಕ ಶರದ್ ಪವಾರ್ ಹಾಗೂ ಮುಖಂಡ ಅಜಿತ್ ಪವಾರ್ ಪಕ್ಷದ ಹೆಸರು ಹಾಗೂ ಚಿಹ್ನೆಯ ಉಳಿಸಿಕೊಳ್ಳುವ ಮೂಲಕ ಬಣ ರಾಜಕೀಯದಲ್ಲಿ ಮೇಲುಗೈ ಸಾಧಿಸುವ ಪ್ರಯತ್ನಿಸಿದ್ದಾರೆ. ಇದೀಗ ಇದೇ ವಿಷಯವು ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಿದೆ.
ಇದನ್ನೂ ಓದಿ:Maharashtra Politics: 4 ವರ್ಷದಲ್ಲಿ 4 ಪ್ರಮಾಣವಚನ ಸಮಾರಂಭ ಕಂಡ ಮಹಾರಾಷ್ಟ್ರ: ಒಂದೇ ವರ್ಷದಲ್ಲಿ ಶಿವಸೇನೆ, ಎನ್‌ಸಿಪಿ ಇಬ್ಭಾಗ!
ಶಿವಸೇನೆ (ಏಕನಾಥ್ ಶಿಂಧೆ) ಹಾಗೂ ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿರುವ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಸರ್ಕಾರದಲ್ಲಿ ಅಧಿಕಾರ ಕೂಡ ವಹಿಸಿಕೊಂಡಿದ್ದಾರೆ. ಜೊತೆಗೆ ಅಜಿತ್ ಬಣದ ಇತರ ಎಂಟು ಮಂದಿ ಶಾಸಕರು ಸಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜುಲೈ 2ರಂದು ನಡೆದ ಈ ರಾಜಕೀಯ ಬೆಳವಣಿಗೆಯು ಎನ್ಸಿಪಿಯನ್ನು ಇಬ್ಭಾಗ ಮಾಡಿದೆ. ಸದ್ಯ ಪಕ್ಷದ ಸಂಸ್ಥಾಪಕರಾದ ಹಿರಿಯ ರಾಜಕಾರಣಿ ಶರದ್ ಪವಾರ್ ಪಕ್ಷದ ಮೇಲೆ ಹಿಡಿತ ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಮತ್ತೊಂದೆಡೆ, ಅಜಿತ್ ಪವಾರ್ ಬಣವೇ ಮೂಲ ಎನ್‌ಸಿಪಿ ಎಂದು ಹೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:Maharashtra Politics: ಅಜಿತ್ ಸಭೆಯಲ್ಲಿ 29, ಶರದ್ ಸಭೆಯಲ್ಲಿ 11 ಶಾಸಕರ ಹಾಜರಿ: 13 ಶಾಸಕರೆಲ್ಲಿ?
ಚುನಾವಣಾ ಆಯೋಗಕ್ಕೆ ಅಜಿತ್ ಬಣ ಅರ್ಜಿ: ಅಜಿತ್ ಪವಾರ್ ಬಣವು ಎನ್‌ಸಿಪಿ ಮತ್ತು ಪಕ್ಷದ ಚಿಹ್ನೆಯ ಮೇಲೆ ಹಕ್ಕು ಸಾಧಿಸುವ ಅರ್ಜಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಇದನ್ನು ಚುನಾವಣಾ ಆಯೋಗ ಬಹಿರಂಗ ಪಡಿಸಿದೆ. 1968ರ ಚಿಹ್ನೆಗಳ ಆದೇಶದ ಪ್ಯಾರಾ 15ರಡಿಯಲ್ಲಿ ಜೂನ್ 30ರಂದು ಅಜಿತ್ ಪವಾರ್ ಅರ್ಜಿ ಸಲ್ಲಿಸಿದ್ದಾರೆ. ಸಂಸದರು/ಎಂಎಲ್‌ಎಗಳು/ಎಂಎಲ್‌ಸಿಗಳ 40 ಅಫಿಡವಿಟ್‌ಗಳನ್ನು ಅರ್ಜಿ ಒಳಗೊಂಡಿದ್ದು, ಅವಿರೋಧವಾಗಿ ಎನ್‌ಸಿಪಿ ಅಧ್ಯಕ್ಷರಾಗಿ ಅಜಿತ್ ಪವಾರ್ ಅವರನ್ನು ಆಯ್ಕೆ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಜುಲೈ 5ರಂದು ಆಯೋಗವು ಈ ಅರ್ಜಿಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬಂಡಾಯ ಶಾಸಕರ ಅನರ್ಹತೆ ಕೋರಿದ ಶರದ್ ಬಣ: ಮತ್ತೊಂದೆಡೆ, ಜುಲೈ 2ರಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂಬತ್ತು ಬಂಡಾಯ ಸದಸ್ಯರ ಅನರ್ಹತೆಗಾಗಿ ಸಕ್ಷಮ ಪ್ರಾಧಿಕಾರದ ಮುಂದೆ ಅನರ್ಹತೆಯ ವಿಚಾರಣೆಗೆ ಮಹಾರಾಷ್ಟ್ರದ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಕೇವಿಯಟ್ ಸಲ್ಲಿಸಿದ್ದಾರೆ. ಜುಲೈ 3ರಂದು ಜಯಂತ್ ಪಾಟೀಲ್ ಇಮೇಲ್ ಮೂಲಕ ಕೇವಿಯಟ್ ಸಲ್ಲಿಕೆ ಮಾಡಿದ್ದಾರೆ. ಈಗಿರುವ ಕಾನೂನು ಚೌಕಟ್ಟಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:Maharashtra politics: ಸರ್ಕಾರ ರಚಿಸಲು ಶಿವಸೇನೆ ಜೊತೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಬೇಡ: ಡಿಸಿಎಂ ಪವಾರ್ ಪ್ರಶ್ನೆ