ಕರ್ನಲ್(ಹರಿಯಾಣ) :ಕೇಂದ್ರ ಸರ್ಕಾರದ ನಾಯಕರು ಹಾಗೂ ಸ್ಥಳೀಯ ಜಿಲ್ಲಾಡಳಿತದ ಜೊತೆಗೆ ಮಾತುಕತೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಕೆರಳಿದ ರೈತರು ಸಾವಿರಾರು ಸಂಖ್ಯೆಯಲ್ಲಿ ಹರಿಯಾಣದ ಕರ್ನಲ್‌ನ ಜಿಲ್ಲಾಧಿಕಾರದ ಮುಖ್ಯ ಕಚೇರಿಗೆ ರ್ಯಾಲಿ ಮೂಲಕ ತೆರಳುತ್ತಿದ್ದಾರೆ.
ಆಗಸ್ಟ್ 28ರಂದು ಪ್ರತಿಭಟನಾನಿರತ ರೈತರ ಮೇಲೆ ಲಾಠಿ ಪ್ರಹಾರ ಮಾಡಿದ ಅಧಿಕಾರಿಗಳ ವಿರುದ್ಧ ರೈತ ನಾಯಕರು ಕಠಿಣಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದೇ ಇದ್ದಲ್ಲಿ ಸರ್ಕಾರದ ಮಿನಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಇವತ್ತು ಬೆಳಗ್ಗೆ ಮಹಾ ಪಂಚಾಯತ್ ನಡೆಯುತ್ತಿರುವ ಇಲ್ಲಿನ ಹೊಸ ಅನಜ್ ಮಂಡಿಗೆ ಟ್ರ್ಯಾಕ್ಟರ್ ಮತ್ತು ಮೋಟಾರು ಸೈಕಲ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದಾರೆ. ಈ ವೇಳೆ ಸ್ಥಳೀಯಾಡಳಿತ 11 ಮಂದಿಯ ನಿಯೋಗವು ಅವರನ್ನು ಭೇಟಿ ಮಾಡಿ, ರ್ಯಾಲಿಯಿಂದ ಹಿಂದೆ ಸರಿಯುವ ಬಗ್ಗೆ ಮನವೊಲಿಸುವ ಕಾರ್ಯ ಮಾಡಿದೆ.
ಈ ಬಗ್ಗೆ ಮಾತನಾಡಿರುವ ರೈತ ನಾಯಕರೊಬ್ಬರು, ಸ್ಥಳೀಯ ಆಡಳಿತದ ಜೊತೆ ನಮ್ಮ ಮಾತುಕತೆ ಫಲಪ್ರದವಾಗಿಲ್ಲ. ಅವರು ನಮ್ಮ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿಲ್ಲ ಎಂದರು. ಇದಕ್ಕೂ ಮೊದಲು ಬಿಕೆಯು ಸಂಘಟನೆಯ ನಾಯಕ ರಾಕೇಶ್ ಟಿಕಾಯತ್ ಮಾತನಾಡಿ, ಪ್ರತಿಭಟನಾನಿರತರ ತಲೆಗಳನ್ನು ಒಡೆಯುವಂತೆ ಜಿಲ್ಲಾಧಿಕಾರಿ ಪೊಲೀಸರಿಗೆ ಸೂಚಿಸಿರುವುದಕ್ಕೆ ಸಾಕ್ಷಿ ಇದೆ. ಹೀಗಾಗಿ, ಅವರನ್ನು ತಕ್ಷಣ ಅಮಾನತು ಮಾಡುವಂತೆ ನಾವು ಬೇಡಿಕೆ ಇಟ್ಟಿದ್ದೇವೆ ಎಂದರು.