ಲಖನೌ(ಉತ್ತರಪ್ರದೇಶ):ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಸಿಗದೇ ಪ್ರಾಣಪಕ್ಷಿ ಹಾರಿಹೋದ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಉತ್ತರಪ್ರದೇಶ ಸರ್ಕಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಉಪಾಯವನ್ನು ಕಂಡುಕೊಂಡಿದೆ. ಓಲಾ, ಉಬರ್ ಮಾದರಿಯಲ್ಲಿ ಆಂಬ್ಯುಲೆನ್ಸ್ಗಳು ಕೂಡಾ ಲಭ್ಯವಾಗುವಂತಹ ಯೋಜನೆ ಇದು.
ಇದಕ್ಕಾಗಿ ಸಿಎಂ ಯೋಗಿ ಸರ್ಕಾರ ಖಾಸಗಿ ಸಂಸ್ಥೆಗಳ ಜೊತೆ ಕೈ ಜೋಡಿಸಲಿದೆ. ಈ ಮೂಲಕ ಆಂಬ್ಯುಲೆನ್ಸ್ಗಳು ಆಯಾ ಪ್ರದೇಶದಲ್ಲಿ ಬೀಡುಬಿಟ್ಟು ಅಗತ್ಯಬಿದ್ದಾಗ ಕರೆ ಮಾಡುವ ಜನರಿಗೆ ಉಚಿತವಾಗಿ ತುರ್ತು ಸೇವೆ ನೀಡಲಿವೆ.
ಈ ಸೇವೆಗಾಗಿ ಮುಖ್ಯಮಂತ್ರಿ ಸೇರಿದಂತೆ ತಜ್ಞರ ಸಮಿತಿ ರಚಿಸಲಾಗಿದೆ. ಸರ್ಕಾರವೇ ನೇರವಾಗಿ ಆಂಬ್ಯುಲೆನ್ಸ್ಗಳನ್ನು ಸಕಾಲಕ್ಕೆ ತಲುಪಿಸಲು ಅಸಾಧ್ಯವಾದ ಕಾರಣ, ಖಾಸಗಿ ಸಹಭಾಗಿತ್ವದಲ್ಲಿ ಈ ಸೇವೆಯನ್ನು ವಿಸ್ತರಿಸಲು ಯೋಜಿಸಲಾಗಿದೆ.
ಇವುಗಳ ಕಾರ್ಯವಿಧಾನ ಹೇಗೆ?:ಖಾಸಗಿ ಸಹಭಾಗಿತ್ವದಲ್ಲಿ ಆರಂಭವಾಗುವ ಆಂಬ್ಯುಲೆನ್ಸ್ಗಳು ಓಲಾ, ಉಬರ್ ಮಾದರಿಯಲ್ಲಿ ಆಯಾ ಪ್ರದೇಶದಲ್ಲಿ ಲಭ್ಯವಿರುತ್ತವೆ. ತುರ್ತು ಅಗತ್ಯ ಬಿದ್ದಾಗ ಸಂಪರ್ಕಿಸಿದಲ್ಲಿ ಸೇವೆ ಲಭ್ಯವಾಗಲಿದೆ. ತರಬೇತಿ ಪಡೆದ ಸಿಬ್ಬಂದಿಯನ್ನು ಆಂಬ್ಯುಲೆನ್ಸ್ಗಳು ಒಳಗೊಂಡಿರುತ್ತವೆ. ವಿವಿಧ ಸ್ಥಳಗಳಲ್ಲಿ ಅವು ನಿಂತಿರುತ್ತವೆ. ಕರೆ ಮಾಡಿದ ತಕ್ಷಣ ಆಂಬ್ಯುಲೆನ್ಸ್ ಲಭ್ಯವಿರುತ್ತದೆ. ರೋಗಿಯನ್ನು ಆಸ್ಪತ್ರೆಗೆ ಕರೆತಂದ ಖಾಸಗಿ ಆಂಬ್ಯುಲೆನ್ಸ್ನ ಖರ್ಚು ಸರ್ಕಾರವೇ ಭರಿಸಲಿದೆ.
ಮೂರು ರೀತಿಯ ಸೇವೆ:ರಾಜ್ಯದಲ್ಲಿ ಮೂರು ರೀತಿಯ ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ. ಮೊದಲನೆಯದಾಗಿ 108 ತುರ್ತು ಆಂಬ್ಯುಲೆನ್ಸ್ ಸೇವೆಯಡಿ ಈಗಾಗಲೇ 2200 ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸರಾಸರಿ 9500 ರೋಗಿಗಳು ಇದರ ಸೇವೆಯನ್ನು ಪಡೆಯುತ್ತಿದ್ದಾರೆ.
ಅದೇ ರೀತಿ ಗರ್ಭಿಣಿ, ಹೆರಿಗೆ ಮತ್ತು ನವಜಾತ ಶಿಶುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು 102 ಆಂಬ್ಯುಲೆನ್ಸ್ ಸೇವೆ ಇದೆ. ಇದಕ್ಕಾಗಿ 2270 ವಾಹನಗಳಿವೆ. ಕೊನೆಯದಾಗಿ 75 ಜಿಲ್ಲೆಗಳಿಗೆ ವೆಂಟಿಲೇಟರ್ ಸೌಲಭ್ಯವುಳ್ಳ 250 ಆ್ಯಂಬುಲೆನ್ಸ್ಗಳನ್ನು ಸೇವೆಗೆ ನೀಡಲಾಗಿದೆ.
ಇದನ್ನೂ ಓದಿ:15 ದಿನದ ಹಿಂದೆ ಕೇಸ್, 6 ದಿನದಲ್ಲೇ ವಿಚಾರಣೆ ಪೂರ್ಣ: ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ ಜೀವಾವಧಿ ಶಿಕ್ಷೆ