ಹೈದರಾಬಾದ್ :ಪ್ರಾಣಾಪಾಯದಲ್ಲಿ ಇರುವವರಿಗೆ ತುರ್ತು ಸಹಾಯ ಮಾಡುವ ಉದ್ದೇಶದಿಂದ ಸೈರನ್ ಸದ್ದು ಕೇಳಿದರೆ ಸಾಕು ತಕ್ಷಣ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುತ್ತಾರೆ. ಆದ್ರೆ, ಇಲ್ಲಿನ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕನೊಬ್ಬ ಟ್ರಾಫಿಕ್ ಕ್ಲಿಯರೆನ್ಸ್ ಪಡೆಯಲು ಆಂಬ್ಯುಲೆನ್ಸ್ ಸೈರನ್ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಶ್ಯಕತೆ ಇಲ್ಲದಿದ್ದರೂ ಸಹ ಆಂಬ್ಯುಲೆನ್ಸ್ ಸೈರನ್ ಬಾರಿಸಿ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಿವೆ. ಹೀಗಾಗಿ, ಇವರ ಚೇಷ್ಟೆಯಿಂದ ಆಂಬ್ಯುಲೆನ್ಸ್‌ಗಳಿಗೆ ಸೈಡ್ ನೀಡುವುದೇ ತಪ್ಪು ಎಂದು ಜನ ಭಾವಿಸುವಂತಾಗಿದೆ. ಇತ್ತೀಚೆಗೆ ಆಂಬ್ಯುಲೆನ್ಸ್ ಚಾಲಕನೊಬ್ಬ ಮಿರ್ಚಿ, ಬಜ್ಜಿ ಸವಿಯಲು ತನ್ನ ಕರ್ತವ್ಯವನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ಹೈದರಾಬಾದ್ನಲ್ಲಿ ಘಟನೆ ನಡೆದಿದ್ದು, ಡಿಜಿಪಿ ಗಂಭೀರ ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ಜನನಿಬಿಡ ಬಶೀರ್‌ಬಾಗ್ ಜಂಕ್ಷನ್ ಮೂಲಕ ಆಂಬ್ಯುಲೆನ್ಸ್ ಹಾದು ಹೋಗುತ್ತಿದ್ದಾಗ ಚಾಲಕ ಸೈರನ್ ಆನ್ ಮಾಡಿದ್ದಾನೆ. ನಂತರ, ಕಾನ್ಸ್ಟೇಬಲ್ ತಕ್ಷಣ ಆಂಬ್ಯುಲೆನ್ಸ್ ಚಲಿಸಲು ಟ್ರಾಫಿಕ್ ತೆರವುಗೊಳಿಸಿದ್ದಾರೆ. ಬಳಿಕ, ಟ್ರಾಫಿಕ್ ಸಿಗ್ನಲ್‌ನಿಂದ ಸುಮಾರು 100 ಮೀಟರ್ ದೂರದಲ್ಲಿರುವ ರಸ್ತೆ ಬದಿಯ ಉಪಹಾರ ಗೃಹದ ಬಳಿ ಆಂಬ್ಯುಲೆನ್ಸ್ ನಿಂತಿರುವುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು, ಚಾಲಕನ ಬಳಿ ಹೋಗಿ ವಿಚಾರಿಸಿದ್ದಾರೆ.
ನೀನು ಸೈರನ್ ಹಾಕಿದ ಮೇಲೆ ನಾನು ಆಂಬುಲೆನ್ಸ್‌ಗೆ ಕ್ಲಿಯರೆನ್ಸ್ ಕೊಟ್ಟೆ. ಆದರೆ, ಆಸ್ಪತ್ರೆಗೆ ಹೋಗದೆ ಮಿರ್ಚಿ, ಬಜ್ಜಿ ತಿಂದು ಟೀ ಕುಡಿಯುತ್ತೀಯ. ರೋಗಿ ಎಲ್ಲಿ?, ಬಜ್ಜಿ ತಿನ್ನಲು ಸೈರನ್ ಆನ್ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆಂಬ್ಯುಲೆನ್ಸ್ ಪರಿಶೀಲಿಸಿದಾಗ ಯಾವುದೇ ರೋಗಿ ಇರಲಿಲ್ಲ. ವಾಹನದಲ್ಲಿ ಇಬ್ಬರು ನರ್ಸ್‌ಗಳು, ಇತರರಿದ್ದರು. ಬಳಿಕ, ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನ ವಿರುದ್ಧ 1,000 ರೂಪಾಯಿ ದಂಡ ವಿಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಆಂಬ್ಯುಲೆನ್ಸ್ ಇಲ್ಲದ್ದಕ್ಕೆ ಸೈಕಲ್ ಮೇಲೆಯೇ ವೃದ್ಧೆಯ ಶವ ಸಾಗಣೆ ; ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಮಾನವೀಯ ಘಟನೆ
ಅಂಜನಿ ಕುಮಾರ್ ಟ್ವೀಟ್ :ಘಟನೆ ಕುರಿತಾದ ಎಲ್ಲ ದೃಶ್ಯಗಳನ್ನು ಟ್ರಾಫಿಕ್ ಕಾನ್ಸ್ಟೇಬಲ್ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಮಂಗಳವಾರ ಟ್ವಿಟರ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಸೈರನ್‌ಗಳ ದುರುಪಯೋಗವನ್ನು ಉಲ್ಲೇಖಿಸಿ, ಆಂಬ್ಯುಲೆನ್ಸ್ ಸೇವೆಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕೆಂದು ಒತ್ತಾಯಿಸಿದ್ದಾರೆ. "ತುರ್ತು ಪರಿಸ್ಥಿತಿ ಇದ್ದ ವೇಳೆ ತ್ವರಿತ ಮತ್ತು ಸುರಕ್ಷಿತ ಮಾರ್ಗಕ್ಕಾಗಿ ಸೈರನ್‌ಗಳನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ಹೀಗೆ ಅನಾವಶ್ಯಕವಾಗಿ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಇದನ್ನೂ ಓದಿ :ಆಟೋ ರಿಕ್ಷಾದಲ್ಲೇ 95 ವರ್ಷದ ವೃದ್ಧೆಯ ಮೃತದೇಹ ಸಾಗಿಸಿದ ಕುಟುಂಬಸ್ಥರು; ಪುಣೆಯಲ್ಲೊಂದು ಹೃದಯವಿದ್ರಾವಕ ಘಟನೆ