ಲಖನೌ (ಉತ್ತರ ಪ್ರದೇಶ):ನಿನ್ನೆ ಸಾವನ್ನಪ್ಪಿದ ಪ್ರಸಿದ್ಧ ಇತಿಹಾಸಕಾರ ಯೋಗೇಶ್ ಪ್ರವೀಣ್(82) ಅವರ ಸಾವಿಗೆ ಆ್ಯಂಬುಲೆನ್ಸ್ 2 ಗಂಟೆ ವಿಳಂಬವಾಗಿ ಬಂದಿದ್ದೇ ಕಾರಣ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ, ನಾವು ಆ್ಯಂಬುಲೆನ್ಸ್‌ಗೆ ಕರೆ ಮಾಡಿದೆವು. ಆದರೆ, ಕರೆ ಮಾಡಿ ಎರಡು ಗಂಟೆಗಳು ಕಳೆದರೂ ಆ್ಯಂಬುಲೆನ್ಸ್ ಬರದ ಕಾರಣ ನಾವು ಅವರನ್ನು ಬಾಲರಂಪುರ ಆಸ್ಪತ್ರೆಗೆ ಖಾಸಗಿ ಕಾರಿನಲ್ಲಿ ಕರೆದೊಯ್ದೆವು, ಆದರೆ, ಅಲ್ಲಿ ವೈದ್ಯರು ಯೋಗೇಶ್ ಸಾವನ್ನಪ್ಪಿರುವುದಾಗಿ ಹೇಳಿದರು ಎಂದು ಮೃತರ ಸಹೋದರ ಕಾಮೇಶ್ ಶ್ರೀವಾಸ್ತವ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅವರ ಸೋದರಳಿಯ ಸೌರಭ್ ನಾವು ಯುಪಿ 112 ಗೆ ಕರೆ ಮಾಡಿದೆವು, 10 ನಿಮಿಷಗಳಲ್ಲಿ ಆ್ಯಂಬುಲೆನ್ಸ್ ಬರಲಿದೆ ಎಂದು ಹೇಳಿದರು ಹೀಗಾಗಿ ನಾವು ಕಾದೆವು ಎಂದು ಹೇಳಿದ್ದಾರೆ. ನಂತರ ಆ್ಯಂಬುಲೆನ್ಸ್ ಡ್ರೈವರ್ ಕರೆ ಮಾಡಿ ತಾನು ಬೇರೆ ಪ್ರದೇಶಕ್ಕೆ ಬಂದಿರುವುದಾಗಿ ಹೇಳಿದ. ನಂತರ ಪುನಃ 112ಗೆ ಕರೆ ಮಾಡಿ ಮತ್ತೊಂದು ಆ್ಯಂಬುಲೆನ್ಸ್ ಕಳಿಸುವಂತೆ ಕೇಳಿಕೊಳ್ಳಲಾಯ್ತು. ಇದರಲ್ಲೇ ಎರಡು ಗಂಟೆಗಳು ವ್ಯರ್ಥವಾದವು ಎಂದು ತಿಳಿಸಿದ್ರು.
ಖ್ಯಾತ ಇತಿಹಾಸಕಾರ ಮತ್ತು ಪದ್ಮಶ್ರೀ ಪುರಸ್ಕೃತ, 82 ವರ್ಷದ ಡಾ. ಯೋಗೇಶ್ ಪ್ರವೀಣ್, ಮುಖ್ಯವಾಗಿ ಲಖನೌದ ಅವಧ್ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಪರಿಣತರಾಗಿದ್ದು, 24 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ಕ್ಷೇತ್ರದಲ್ಲಿ ಸಹ ಸೇವೆ ಸಲ್ಲಿಸಿದ್ದು, ಕೆಲವು ಸಿನಿಮಾದ ಹಾಡುಗಳಿಗೆ ಸಾಹಿತ್ಯ ರಚನೆ ಸಹ ಮಾಡಿದ್ದಾರೆ. ಕಳೆದ ವರ್ಷ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ನೀಡಲಾಗಿದೆ.
ಅವರ 'ಲಖನೌ ನಾಮಾ' ಪುಸ್ತಕಕ್ಕಾಗಿ ಅವರು ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಯುಪಿ ರತ್ನ ಪ್ರಶಸ್ತಿ (2000), ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ (1999), ಯಶ್ ಭಾರತಿ ಪ್ರಶಸ್ತಿ (2006), ಮತ್ತು ಯುಪಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1998) ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಯೋಗೇಶ್ ಪ್ರವೀಣ್ ಭಾಜನರಾಗಿದ್ದರು.