ಪಾಮೂರು (ಆಂಧ್ರ ಪ್ರದೇಶ):ಅಪಘಾತ, ದುರಂತ ಸಂಭವಿಸಿದಾಗ ಅಥವಾ ಅತ್ಯವಸರಕ್ಕಾಗಿ ಆಂಬ್ಯುಲೆನ್ಸ್ ಬಳಸುತ್ತೇವೆ. ಆದರೆ, ಅದೇ ಆಂಬ್ಯುಲೆನ್ಸ್ ಅಪಾಯಕಾರಿಯಾದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು ಇಡೀ ಆಂಬ್ಯುಲೆನ್ಸ್ ಹೊತ್ತಿ ಉರಿದಿದೆ. ಇದರಿಂದ ಓರ್ವ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಕಾಶಂ ಜಿಲ್ಲೆಯ ಪಾಮೂರು ಮಂಡಲದ ರಾಜಾಸಾಹೇಬಪೇಟೆಯಲ್ಲಿ ಸೋಮವಾರ ಈ ಅಗ್ನಿ ಅವಘಢ ನಡೆದಿದೆ. ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಪಿ.ಯೇಸುರಾಜು ಎಂಬುವರನ್ನು ರಾಜಾಸಾಹೇಬಪೇಟೆಯಿಂದ ಡಯಾಲಿಸಿಸ್‌ಗೆ ಕರೆದೊಯ್ಯಲು ಮನೆಯವರು 108ಗೆ ಕರೆ ಮಾಡಿದ್ದರು. ಯೇಸುರಾಜು ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಸ್ವಲ್ಪ ದೂರ ಸಾಗಿದ ಬಳಿಕ ಆಂಬ್ಯುಲೆನ್ಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ತಕ್ಷಣವೇ ಮುಂಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಎಚ್ಚೆತ್ತ ವಾಹನ ಚಾಲಕನ ತಿರುಪತಿ ರಾವ್ ವಾಹನ ನಿಲ್ಲಿಸಿದ್ದಾರೆ. ಅದರಲ್ಲಿದ್ದ ರೋಗಿ ಮತ್ತು ಆತನ ತಾಯಿಯನ್ನು ಕೆಳಗಿಸಿದ್ದಾರೆ. ಇದಾದ ಸ್ವಲ್ಪದರಲ್ಲೇ ನೋಡನೋಡುತ್ತಿದ್ದಂತೆ ಬೆಂಕಿ ಇಡೀ ವಾಹನವನ್ನು ವ್ಯಾಪಿಸಿ, ಅಗ್ನಿ ಕೆನ್ನಾಲಿಗೆ ಧಗಧಗಿಸಿದೆ.
ಆಮ್ಲಜನಕ ಸಿಲಿಂಡರ್ ಸ್ಫೋಟ:ಆಂಬ್ಯುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಒಳಗಿದ್ದ ಆಮ್ಲಜನಕದ ಸಿಲಿಂಡರ್ ಸ್ಫೋಟಗೊಂಡಿದೆ. ಇದರಿಂದ ವಾಹನದ ಚೂರುಗಳು ಹಾರಿ ಸಮೀಪದ ತಂಬಾಕು ಹೊಲದ ಮೇಲೆ ಬಿದ್ದಿವೆ. ರೈತ ಪೊನ್ನಗಂಟಿ ನರಸಿಂಹಂ, ಪದ್ಮಾ, ಜಯಮ್ಮ ಎಂಬುವರ ಜಮೀನಿಗೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ 40 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ತಂಬಾಕು ಬೆಂಕಿಗೆ ಆಹುತಿಯಾಗಿದೆ. ಇದೇ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಾಧಿನೇನಿ ವರದಯ್ಯ ಎಂಬುವರು ಬೆಂಕಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಒಂಗೋಲ್‌ನಲ್ಲಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.