ಚೆನ್ನೈ:"ಬಿಜೆಪಿಯನ್ನು ಸೋಲಿಸಲು ಭಾರತೀಯ ನ್ಯಾಯಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕ ಬಿ.ಆರ್.ಅಂಬೇಡ್ಕರ್ ಮತ್ತು ತಮಿಳುನಾಡಿನಲ್ಲಿ ಸ್ವಾಭಿಮಾನ ಚಳವಳಿಯನ್ನು ಪ್ರಾರಂಭಿಸಿದ ವಿಚಾರವಾದಿ ಪೆರಿಯಾರ್ (ಇ.ವಿ.ರಾಮಸ್ವಾಮಿ) ಅವರ ಸಿದ್ಧಾಂತಗಳು ಅತ್ಯಂತ ಪ್ರಮುಖವಾಗಿವೆ" ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ಚೆನ್ನೈಗೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಭೇಟಿ ಮಾಡಿ ಮಾತನಾಡಿ, "ತಮಿಳುನಾಡಿನಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಸಿದ್ಧಾಂತಗಳ ಬಲವಾದ ಕೋಟೆ ನಿರ್ಮಾಣವಾಗಿದ್ದು ಬಿಜೆಪಿಗೆ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ತಮ್ಮ ರಾಜ್ಯದಲ್ಲಿ ಸೋಲಿಸಲಾಗುವುದು" ಎಂದರು.
ಮೇಕೆದಾಟು ವಿಚಾರ: ಸ್ಟಾಲಿನ್ ಭೇಟಿ ವೇಳೆ ಕಾವೇರಿ ಅಥವಾ ಮೇಕೆದಾಟು ವಿಚಾರವಾಗಿ ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಕೈ ಕುಲುಕಿ, "ಇದು ಸೌಜನ್ಯದ ಭೇಟಿ ಅಷ್ಟೆ" ಎಂದರು. ಸ್ಟಾಲಿನ್ ಅವರ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಓದಿದ್ದೆ, ಕೇಳಿದ್ದೆ ಎಂದು ಪ್ರತಿಕ್ರಿಯಿಸಿದರು.
'ಅಂಬೇಡ್ಕರ್ ಸುದರ್ ಪ್ರಶಸ್ತಿ': ತಮಿಳುನಾಡಿನ ರಾಜಕೀಯ ಪಕ್ಷವಾದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ವತಿಯಿಂದ ಅಂಬೇಡ್ಕರ್ ಸುದರ್ ಪ್ರಶಸ್ತಿ ಸ್ವೀಕರಿಸಿರುವ ಕುರಿತು ಪ್ರತಿಕ್ರಿಯಿಸಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿಯಾಗಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಸಂತೋಷವಾಗಿದೆ ಎಂದು ಉತ್ತರಿಸಿದರು.
ಇದನ್ನೂ ಓದಿ:ಒಂದು ಭಾಷೆ, ಸಂಸ್ಕೃತಿ ಹೇರಲು ಪ್ರಯತ್ನಿಸುವವರು ದೇಶದ ಶತ್ರುಗಳು: ಸಿಎಂ ಸ್ಟಾಲಿನ್