ಅಮರಾವತಿ (ಆಂಧ್ರ ಪ್ರದೇಶ): ಭಾರತದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಗುರುವಾರ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಒಂದು ತಿಂಗಳ ಅಂತರದಲ್ಲಿ ಸಿಎಂ ಜಗನ್ ಅವರನ್ನು ಅಂಬಡಿ ರಾಯುಡು ಭೇಟಿಯಾಗಿರುವುದು ಎರಡನೇ ಸಲ. ಹೀಗಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಐಪಿಎಲ್ ಟೂರ್ನಿಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರರಾದ ಅಂಬಟಿ ರಾಯುಡು ಮತ್ತು ಸಿಎಂ ಜಗನ್ ಭೇಟಿ ಸಂದರ್ಭದಲ್ಲಿ ಸಿಎಸ್‌ಕೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಸಹ ಜೊತೆಗಿದ್ದರು. ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ ಗೆದ್ದ ಟ್ರೋಫಿಯನ್ನು ಸಿಎಂಗೆ ಪ್ರದರ್ಶಿಸಿದರು. ಇದೇ ವೇಳೆ ಸಿಎಸ್‌ಕೆ ತಂಡಕ್ಕೆ ಜಗನ್ ಅಭಿನಂದಿಸಿದರು.
ಈ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಚೇರಿ (CMO Andhra Pradesh) ಟ್ವೀಟ್ ಮಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಮತ್ತು ಕ್ರಿಕೆಟಿಗ ಅಂಬಟಿ ರಾಯುಡು ಅವರು ಮುಖ್ಯಮಂತ್ರಿ ವೈಎಸ್ ಜಗನ್ ಅವರನ್ನು ಸಿಎಂ ಕ್ಯಾಂಪ್ ಕಚೇರಿಯಲ್ಲಿ ಭೇಟಿಯಾದರು. ಸಿಎಸ್‌ಕೆ ಫ್ರಾಂಚೈಸಿ ಮಾಲೀಕ ಎನ್.ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಹಾಗೂ ಅಂಬಟಿ ರಾಯುಡು ಇತ್ತೀಚೆಗೆ ಸಿಎಸ್‌ಕೆ ಗೆದ್ದ ಟ್ರೋಫಿಯನ್ನು ತೋರಿಸಿದರು. ಜೊತೆಗೆ ಸಿಎಸ್‌ಕೆ ತಂಡದ ಸದಸ್ಯರ ಹಸ್ತಾಕ್ಷರವಿರುವ ಸಿಎಂ ಅವರಿಗೆ ಜೆರ್ಸಿಯನ್ನು ನೀಡಿದರು ತಿಳಿಸಿದೆ.