ನವದೆಹಲಿ:ಜನವರಿ 1, 2021ರಿಂದ ಡಿಸೆಂಬರ್ 31, 2022ರವರೆಗೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡು ವರ್ಷದ ಸದಸ್ಯತ್ವದ ಅವಧಿಯಲ್ಲಿ ಮೊದಲ ಬಾರಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಆಗಸ್ಟ್ 1 ರಿಂದ ಭಾರತ ಒಂದು ತಿಂಗಳ ಕಾಲದವರೆಗೆ ವಹಿಸಿಕೊಂಡಿದೆ.
ಕಡಲ ಭದ್ರತೆ, ಶಾಂತಿಪಾಲನೆ, ಭಯೋತ್ಪಾದನೆ ನಿಗ್ರಹ ನಮ್ಮ ಗುರಿ: ಟಿ.ಎಸ್.ತಿರುಮೂರ್ತಿ ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು ಭಾರತಕ್ಕೆ ಅವಕಾಶ ದೊರೆತಿದ್ದು ಸಂತೋಷದ ಸಂಗತಿ. ಇದು ನಮ್ಮ 8ನೇ ಅಧಿಕಾರವಧಿಯಾಗಿದೆ. ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟ ರೂಪಿಸುವುದಕ್ಕೆ ನಮಗೆ ಮತ್ತೊಂದು ಅವಕಾಶ ದೊರೆತಿದೆ ಎಂದು ಹೇಳಿದರು.
ಯುಎನ್‌ಎಸ್‌ಸಿಯಲ್ಲಿ ಹಲವು ರಾಷ್ಟ್ರಗಳಿದ್ದು, ಭಿನ್ನ ಅಭಿಪ್ರಾಯಗಳನ್ನು ಹೊಂದಿವೆ. ನಾವು ಜಾಗತಿಕ ಹಿತಾಸಕ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದರು.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಘರ್ಷಗಳು ಹೆಚ್ಚಾಗಿವೆ. ಇಂಥ ಸಂದರ್ಭದಲ್ಲಿ ಭಾರತ ಯುಎನ್ಎಸ್ಸಿಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳತ್ತ ಗಮನಹರಿಸಲಿದೆ ಎಂದು ಹೇಳಿದ್ದಾರೆ. ಉದಾಹರಣೆಗೆ ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧದ ಹೋರಾಟ, ಶಾಂತಿಪಾಲನೆ, ಶಾಂತಿ ಮತ್ತು ಭದ್ರತೆ, ಅಭಿವೃದ್ಧಿಶೀಲ ದೇಶಗಳ ಸಮಸ್ಯೆಗಳು, ವಿಶೇಷವಾಗಿ ಆಫ್ರಿಕಾ ಮತ್ತು ಸಣ್ಣ ರಾಜ್ಯಗಳು, ಮಹಿಳಾ ಮತ್ತು ಮಾನವ ಕೇಂದ್ರಿತ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಇಂದಿನಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಭಾರತ
ಈ ತಿಂಗಳ ಅಧಿಕಾರವಧಿಯಲ್ಲಿ ಕಡಲ ಭದ್ರತೆ, ಶಾಂತಿಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಪ್ರಪಂಚದಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ಗುರುತಿಸಲು ನಾವು ಎಂದಿಗೂ ವಿಫಲವಾಗಿಲ್ಲ. ಆಫ್ರಿಕಾದಲ್ಲಿ ISIL (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್) ಉಗ್ರ ಸಂಘಟನೆ ಅಟ್ಟಹಾಸ ಮಿತಿ ಮೀರಿದೆ. ಈ ವಿಷಯದ ಬಗ್ಗೆ ಚರ್ಚಿಸಲು ನಾವು ಇಚ್ಛಿಸುತ್ತೇವೆ ಎಂದರು.