ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಅಮರನಾಥ ಯಾತ್ರೆಯ ವೇಳೆ ಕಲ್ಲು ಬಂಡೆ ಉರುಳಿಬಿದ್ದು 53 ವರ್ಷದ ಮಹಿಳಾ ಯಾತ್ರಿಕರೊಬ್ಬರು ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಮೃತರನ್ನು ಊರ್ಮಿಳಾ ಬೆನ್ ಎಂದು ಗುರುತಿಸಲಾಗಿದೆ.
ಇಲ್ಲಿನ ಸಂಗಮ್ ಟಾಪ್ ಮತ್ತು ಲೋವರ್ ಕೇವ್ ನಡುವೆ ಭಕ್ತೆ ಊರ್ಮಿಳಾ ಬೆನ್ ಪವಿತ್ರ ಗುಹೆಯತ್ತ ಚಾರಣ ಮಾಡುತ್ತಿದ್ದರು. ಈ ವೇಳೆ ಕಲ್ಲು ಬಂಡೆ ಅಪ್ಪಿಳಿಸಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರಿಗೆ ವೈದ್ಯಕೀಯ ನೆರವು ನೀಡಲಾಯಿತಾದರೂ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಯಾತ್ರಿಕ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿರುವ ಇತರ ಇಬ್ಬರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಮೌಂಟೇನ್ ಪಾರುಗಾಣಿಕಾ ತಂಡದ ಸದಸ್ಯರಾಗಿದ್ದು, ಅವರನ್ನು ಮೊಹಮ್ಮದ್ ಸಲೇಂ ಮತ್ತು ಮೊಹಮ್ಮದ್ ಯಾಸೀನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಸ್ವಾಮಿ ವಿವೇಕಾನಂದರಿಂದ ಪ್ರೇರಿತರಾಗಿ ಅಮರನಾಥ ಯಾತ್ರೆ ಕೈಗೊಂಡ ಇಬ್ಬರು ಅಮೆರಿಕ ಪ್ರಜೆಗಳು!
ಯಾತ್ರಿಕ ಮಹಿಳೆ ಸಾವಿನ ಬಗ್ಗೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಗ್ ಸಿಂಗ್ ಖೇದ ವ್ಯಕ್ತಪಡಿಸಿದ್ದು, ದುಃಖಿತ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ. ಗುಂಡಿನ ಕಲ್ಲುಗಳ ಅವಘಡದ ನಂತರ ತ್ವರಿತ ತೆರವು ಕಾರ್ಯದಲ್ಲಿ ಭಾಗಿಯಾದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪ್ರತಿಯೊಬ್ಬರನ್ನು ಡಿಜಿಪಿ ಅಭಿನಂದಿಸಿದ್ದಾರೆ. ಅಮರನಾಥ ಯಾತ್ರೆಯ ಕರ್ತವ್ಯದ ವೇಳೆ ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಜುಲೈ 1ರಿಂದ ಆರಂಭವಾದ ವಾರ್ಷಿಕ ಅಮರನಾಥ ಯಾತ್ರೆಯ ಭಾಗವಾಗಿ ಶನಿವಾರ ಸುಮಾರು 21,400 ಯಾತ್ರಿಕರು ಪವಿತ್ರ ಗುಹೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವನ ಆವಾಸ ಸ್ಥಾನವಾದ ಅಮರನಾಥ ಗುಹೆಯ ಪ್ರಯಾಸಕರ ಯಾತ್ರೆಯಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದಲೂ ಯಾತ್ರಿಕರು ಬರುತ್ತಿದ್ದಾರೆ. ಈ ವರ್ಷದ 62 ದಿನಗಳ ಯಾತ್ರೆಯು ಆಗಸ್ಟ್ 31ರಂದು ಮುಕ್ತಾಯಗೊಳ್ಳಲಿದೆ.
ನಿರಂತರ ಮಳೆ:ಉತ್ತರ ಭಾರತದಲ್ಲಿ ನಿರಂತರವಾಗಿ ಭಾರಿ ಮಳೆ ಸುರಿಯುತ್ತಿದೆ. ದೆಹಲಿ, ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಮಳೆಯಾಗುತ್ತಿದೆ. ಕಳೆದ ವಾರ ಅಮರನಾಥ ಯಾತ್ರೆಗೆ ಹೊರಟಿದ್ದ ಓರ್ವ ಯಾತ್ರಿಕ ಮೃತಪಟ್ಟಿದ್ದ ಘಟನೆ ನಡೆದಿತ್ತು. ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಸತೀಶ್ (59) ಎಂಬುವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಪ್ರವಾಸಿ ಶಿಬಿರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಉಸಿರು ಚೆಲ್ಲಿದ್ದರು.
ಇದನ್ನೂ ಓದಿ:ಅಮರನಾಥ ಯಾತ್ರಗೆ ತೆರಳಿದ್ದ ಪ್ರವಾಸಿಗ ಸಾವು.. ಉತ್ತರ ಭಾರತದಲ್ಲಿ ಹೆಚ್ಚಿದ ಮಳೆ ಹಾನಿ.. ಜನಜೀವನ ಅಸ್ತವ್ಯಸ್ತ