ಬಲ್ತಾಲ್ (ಜಮ್ಮು ಮತ್ತು ಕಾಶ್ಮೀರ): ಮೇಘಸ್ಫೋಟದಿಂದ ತಾತ್ಕಾಲಿಕವಾಗಿ ಮೊಟಕುಗೊಂಡಿದ್ದ ಅಮರನಾಥ ಯಾತ್ರೆ ಇಂದು ಬೆಳಗ್ಗೆ ನುನ್ವಾನ್ ಪಹಲ್ಗಾಮ್ ಕಡೆಯಿಂದ ಮತ್ತೆ ಶುರುವಾಗಿದೆ ಎಂದು ಅಮರನಾಥ ಕ್ಷೇತ್ರ ಆಡಳಿತ ಮಂಡಳಿ ತಿಳಿಸಿದೆ. ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಕಾಯುತ್ತಿದ್ದ ಯಾತ್ರಾರ್ಥಿಗಳು ಸೋಮವಾರ ತಮ್ಮ ಯಾತ್ರೆ ಪುನರಾರಂಭಿಸಿದ್ದಾರೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಈಗ ತೀರ್ಥಯಾತ್ರೆ ಪುನರಾರಂಭವಾಗಿದೆ. ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಜಮ್ಮುವಿನ ಮೂಲ ಶಿಬಿರದಿಂದ ತೆರಳಲು ಪ್ರಾರಂಭಿಸಿವೆ.
ಜು.8ರಂದು ಪವಿತ್ರ ಗುಹೆಯ ಸಮೀಪ ಉಂಟಾದ ದಿಢೀರ್ ಪ್ರವಾಹದಿಂದಾಗಿ ಶಿಬಿರಗಳಲ್ಲಿ ತಂಗಿದ್ದ ಯಾತ್ರಿಕರಲ್ಲಿ 16 ಜನರು ಮೃತಪಟ್ಟು, ಸುಮಾರು 40 ಮಂದಿ ನಾಪತ್ತೆಯಾಗಿದ್ದರು. ಅಮರನಾಥ ಕ್ಷೇತ್ರದಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಆದರೆ ಬದುಕುಳಿಯುವ ಸಾಧ್ಯತೆ ಕ್ಷೀಣವಾಗಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಮನೋಜ್ ಸಿನ್ಹಾ ಅವರು ಭಾನುವಾರ ಪಹಲ್ಗಾಮ್‌ನಲ್ಲಿರುವ ಬೇಸ್ ಕ್ಯಾಂಪ್‌ಗೆ ಭೇಟಿ ನೀಡಿ ಯಾತ್ರಾರ್ಥಿಗಳನ್ನು ಭೇಟಿ ಮಾಡಿದ್ದರು. "ಭದ್ರತಾ ಸಿಬ್ಬಂದಿ ದಕ್ಷ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಪ್ರಾಣ ಕಳೆದುಕೊಂಡವರಿಗೆ ನಾವು ಸಂತಾಪ ಸೂಚಿಸುತ್ತೇವೆ. ಮಾರ್ಗವನ್ನು ಸರಿಪಡಿಸುವ ಜೊತೆಗೆ ಯಾತ್ರೆಯನ್ನು ಪುನರಾರಂಭಿಸುವ ಪ್ರಯತ್ನಗಳು ನಡೆಯುತ್ತಿವೆ. ಯಾತ್ರಾರ್ಥಿಗಳು ಬರಬೇಕು, ನಾವು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ." ಸಿನ್ಹಾ ಭರವಸೆ ನೀಡಿದರು.
ಇದನ್ನೂ ಓದಿ:Amarnath Cloudburst: 15 ಸಾವಿರ ಯಾತ್ರಿಗಳು ಸ್ಥಳಾಂತರ, 15 ಜನ ಸಾವು, 65ಕ್ಕೂ ಹೆಚ್ಚು ಮಂದಿಗೆ ಗಾಯ