ಶ್ರೀನಗರ: ಹವಾಮಾನದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಂಜತರ್ನಿ, ಶೇಷನಾಗ್ ಶಿಬಿರಗಳಿಂದ ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸತತ ಮೂರನೇ ದಿನವಾದ ಭಾನುವಾರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ್ದರಿಂದ ಅಧಿಕಾರಿಗಳು ಭಾನುವಾರ ಜಮ್ಮು ಬೇಸ್ ಕ್ಯಾಂಪ್‌ನಲ್ಲಿ ಭಕ್ತರ ಗುಂಪನ್ನು ತಡೆದಿದ್ದರು. ಯಾತ್ರೆಯನ್ನು ಸ್ಥಗಿತಗೊಳಿಸಿದ ನಂತರ 6 ಸಾವಿರ ಅಮರನಾಥ ಯಾತ್ರಾರ್ಥಿಗಳು ರಾಂಬನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಗುಹೆಯಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ಣಿಯಲ್ಲಿ ಕರ್ನಾಟಕದ ಕನಿಷ್ಠ 80 ಜನರು ಸಿಲುಕಿಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರ ಶನಿವಾರ ತಿಳಿಸಿತ್ತು.
ಇದನ್ನೂ ಓದಿ:ಅಮರನಾಥ ಯಾತ್ರೆಯಲ್ಲಿ ಹವಾಮಾನ ವೈಪರೀತ್ಯ.. ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು; ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ
"ಅಮರನಾಥ ಯಾತ್ರೆಯನ್ನು ಪ್ರತಿಕೂಲ ಹವಾಮಾನದಿಂದಾಗಿ ನಿನ್ನೆ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರಿಗೆ ಇಲ್ಲಿನ ಯಾತ್ರಿ ನಿವಾಸದಲ್ಲಿ ನಾವು ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಾವು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಡೆಪ್ಯೂಟಿ ಕಮಿಷನರ್ ರಾಂಬನ್ ಮುಸ್ಸರತ್ ಇಸ್ಲಾಂ ಮಾಧ್ಯಮಗಳಿಗೆ ತಿಳಿಸಿದ್ದರು.
ಭೂಕುಸಿತದಿಂದಾಗಿ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿ (NH44) ರಾಂಬನ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜುಲೈ 1ರಂದು ಯಾತ್ರೆ ಆರಂಭವಾದಾಗಿನಿಂದ ಕನಿಷ್ಠ 67,566 ಯಾತ್ರಿಕರು ಅಮರನಾಥ ಗುಹೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಜು.5 ರಂದು ಸುಮಾರು 18,354 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ನಿಂದ ದೇಗುಲಕ್ಕೆ ತೆರಳಿದರು. ಇವರಲ್ಲಿ 12,483 ಪುರುಷರು, 5,146 ಮಹಿಳೆಯರು, 457 ಮಕ್ಕಳು, 266 ಸಾಧುಗಳು ಮತ್ತು 2 ಸಾಧ್ವಿಗಳು ಸೇರಿದ್ದಾರೆ" ಎಂದು ಈ ವಾರದ ಆರಂಭದಲ್ಲಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.