ನವದೆಹಲಿ/ಶ್ರೀನಗರ: ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಸಿಲುಕಿಕೊಂಡಿದ್ದ ಕನಿಷ್ಠ 15,000 ಯಾತ್ರಾರ್ಥಿಗಳನ್ನು ಪಂಜತರ್ನಿಯ ಕೆಳ ಬೇಸ್ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.
ಯಾತ್ರಾರ್ಥಿಗಳು ಸ್ಥಳಾಂತರ:ಕಳೆದ ಸಂಜೆ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಪವಿತ್ರ ಗುಹೆ ಪ್ರದೇಶದ ಬಳಿ ಸಿಲುಕಿಕೊಂಡಿದ್ದ ಹೆಚ್ಚಿನ ಯಾತ್ರಿಗಳನ್ನು ಪಂಜತರ್ನಿಗೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆ ನಸುಕಿನಜಾವ 3.38ರ ವರೆಗೆ ನಡೆಯಿತು. ಇದುವರೆಗೆ ಸುಮಾರು 15,000 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಕ್ತಾರರು ತಿಳಿಸಿದ್ದಾರೆ.
ಸಾವು-ನೋವು: ಈ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರವಾಹದಲ್ಲಿ ತೀವ್ರವಾಗಿ ಗಾಯಗೊಂಡ ಒಂಬತ್ತು ರೋಗಿಗಳಿಗೆ ಅರೆಸೇನಾ ಪಡೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಗಿತಗೊಂಡ ಯಾತ್ರೆ: ದುರಂತದ ನಂತರ ಜೂನ್ 30 ರಂದು ಪ್ರಾರಂಭವಾದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಅದನ್ನು ಪುನಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.