ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ದೆಹಲಿಗೆ ತೆರಳಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 18 ರಂದು ಇದ್ದಕ್ಕಿದ್ದಂತೆ ಅಮರೀಂದರ್ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದರು. ಆ ಬಳಿಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದ್ದು, ಸೆ.20ರಂದು ಪಂಜಾಬ್ನ 16ನೇ ಮುಖ್ಯಮಂತ್ರಿಯಾಗಿ ಚನ್ನಿ ಅಧಿಕಾರ ಸ್ವೀಕರಿಸಿದ್ದರು. ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಓಂ ಪ್ರಕಾಶ್ ಸೋನಿ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದ್ದು, 15 ಸಚಿವರ ಸಂಪುಟವೂ ರಚನೆಯಾಗಿದೆ.
ರಾಜೀನಾಮೆ ಬಳಿಕ ಕಾಂಗ್ರೆಸ್ ನಾಯಕ ಅಮರೀಂದರ್ ಸಿಂಗ್ ಹೊಸ ಪಕ್ಷ ಕಟ್ಟುತ್ತಾರೆಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಈಗ ಬಿಜೆಪಿ ನಾಯಕರನ್ನು ಭೇಟಿಯಾಗುವ ಮಾತು ಕೇಳಿ ಬರುತ್ತಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ.
ಇದನ್ನೂ ಓದಿ: ದೇಶದ ಭದ್ರತೆ ದೃಷ್ಟಿಯಿಂದ ಸಿಧು ಪಂಜಾಬ್ ಸಿಎಂ ಆಗೋಕೆ ನನ್ನ ವಿರೋಧವಿದೆ.. ಕ್ಯಾ. ಅಮರೀಂದರ್ ಸಿಂಗ್
ಅಷ್ಟೇ ಅಲ್ಲ ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಗೆಲ್ಲಲು ಬಿಡುವುದಿಲ್ಲ. ದಕ್ಷ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಿಲ್ಲಿಸುತ್ತೇವೆ. ಯಾವುದೇ ಕಾರಣಕ್ಕೂ ಸಿಧು ಸಿಎಂ ಆಗಲು ಅವಕಾಶ ಮಾಡಿಕೊಡುವುದಿಲ್ಲ. ಅಂತಹ 'ಅಪಾಯಕಾರಿ ಮನುಷ್ಯನಿಂದ ದೇಶವನ್ನು ರಕ್ಷಿಸಲು ಎಂತಹ ತ್ಯಾಗ ಮಾಡಲು ಸಿದ್ಧನಿರುವೆ ಎಂದು ಅಮರೀಂದರ್ ಸಿಂಗ್ ಬಹಿರಂಗ ಹೇಳಿಕೆ ನೀಡಿದ್ದರು.
ಅಮರೀಂದರ್ ಸಿಂಗ್ ವಿರೋಧದ ನಡುವೆಯೂ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪಂಜಾಬ್ನಲ್ಲಿ ಅಧಿಕಾರಕ್ಕೆ ಬಂದು ಸ್ಪಲ್ಪ ದಿನಗಳಲ್ಲೇ ನವಜೋತ್ ಸಿಂಗ್ ಸಿಧು ಹಾಗೂ ಅಮರೀಂದರ್ ಸಿಂಗ್ ನಡುವೆ ಮನಸ್ಥಾಪ ಶುರುವಾಗಿತ್ತು.
ಅದಾದ ಬಳಿಕ ಸಿಧು ಅವರನ್ನು ಅಮರೀಂದರ್ ಸಿಂಗ್ ಸಂಪುಟದಿಂದ ಕೈಬಿಟ್ಟಿದ್ದರು. ಆ ಬಳಿಕ ಉಭಯ ನಾಯಕರ ಮುಸುಕಿನ ಗುದ್ದಾಟ ಬಹಿರಂಗ ಕಾಳಗಕ್ಕೆ ತಿರುಗಿತ್ತು. ಆ ನಂತರ ಹೈಕಮಾಂಡ್ ಅಂಗಳಕ್ಕೂ ಹೋಗಿತ್ತು. ಅಂತಿಮವಾಗಿ ಹೈಕಮಾಂಡ್ ನವಜೋತ್ ಸಿಧು ಅವರ ಪರ ನಿಂತಿದ್ದರಿಂದ ಅನಿವಾರ್ಯವಾಗಿ ಅಮರೀಂದರ್ ಸಿಂಗ್ ಸಿಎಂ ಸ್ಥಾನದಿಂದ ಪದತ್ಯಾಗ ಮಾಡಿದ್ದರು.
ಇದನ್ನೂ ಓದಿ: ಚನ್ನಿ ನೇತೃತ್ವದ ಪಂಜಾಬ್ ನೂತನ ಸಂಪುಟ ಸೇರಿದ 15 ಸಚಿವರಿವರು..