ನವದೆಹಲಿ: ರಾಷ್ಟ್ರೀಯ ಭಾವನೆಗೆ ಸಂಬಂಧಿಸಿದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಆ ವಿವಾದ ರಾಜಕೀಯಗೊಳ್ಳುವ ಮೊದಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದರೂ, ವಿವಾದದ ತೀವ್ರತೆ ಕಡಿಮೆಯಾಗುತ್ತಿಲ್ಲ. ದೆಹಲಿಯ ಇಂಡಿಯಾ ಗೇಟ್ ಬಳಿಯಿರುವ ಅಮರ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತದೆ ಎಂಬ ಊಹಾಪೋಹಗಳಿಂದಾಗಿ ಮತ್ತು ವರದಿಗಳಿಂದಾಗಿ ಸಣ್ಣ ಮಟ್ಟದ ವಿವಾದವೊಂದು ಹುಟ್ಟಿಕೊಂಡಿದೆ. ಈ ವಿವಾದ ರಾಜಕೀಯವಾಗಿಯೂ ಕೆಲವೊಂದು ಟೀಕಾಪ್ರಹಾರಗಳಿಗೆ ಕಾರಣವಾಗಿದೆ.
'ದೇಶಪ್ರೇಮ, ತ್ಯಾಗ ಕೆಲವರಿಗೆ ಅರ್ಥವಾಗುವುದಿಲ್ಲ' :ಅಮರ ಜವಾನ್ ಜ್ಯೋತಿಯನ್ನು ನಂದಿಸುವ ವರದಿಗಳನ್ನು ಆಧರಿಸಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಮ್ಮ ವೀರ ಸೈನಿಕರ ಪ್ರತೀಕವಾಗಿ ಉರಿಯುತ್ತಿದ್ದ ಅಮರ ಜ್ವಾಲೆಯನ್ನು ಇಂದು ನಂದಿಸುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವರಿಗೆ ದೇಶ ಪ್ರೇಮ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೂ ಪರವಾಗಿಲ್ಲ, ನಾವು ನಮ್ಮ ಸೈನಿಕರಿಗಾಗಿ ಅಮರ್ ಜವಾನ್ ಜ್ಯೋತಿಯನ್ನು ಮತ್ತೆ ಬೆಳಗಿಸುತ್ತೇವೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
'ಇತಿಹಾಸವನ್ನು ನಂದಿಸಿದಂತೆ':ಅಮರ್ ಜವಾನ್ ಜ್ಯೋತಿಯನ್ನು ನಂದಿಸುವುದು ಇತಿಹಾಸವನ್ನು ಅಳಿಸುತ್ತಿರುವುದಕ್ಕೆ ಸಮನಾಗಿದೆ. ಅಮರ್ ಜವಾನ್ ಜ್ಯೋತಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುತ್ತಿದೆ. ನೂರು ಕೋಟಿ ಜನರು ಅದನ್ನು ಪೂಜಿಸುತ್ತಾ ಬೆಳೆದಿದ್ದಾರೆ. ಇತಿಹಾಸವನ್ನು ಕೇಂದ್ರ ಸರ್ಕಾರ ಅಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.
ಜ್ಯೋತಿ ನಂದಿಸಲ್ಲ, ವಿಲೀನವಷ್ಟೇ
ಅಮರ ಜವಾನ್ ಜ್ಯೋತಿಯನ್ನು ನಂದಿಸಲಾಗುತ್ತದೆ ಎಂಬ ವರದಿಗಳಿಗೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಸರ್ಕಾರದ ಮೂಲಗಳು, ಅಮರ ಜವಾನ್ ಜ್ಯೋತಿಯನ್ನು ಆರಿಸುತ್ತಿಲ್ಲ. ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ವಾಲೆಯಲ್ಲಿ ವಿಲೀನ ಮಾಡಲಾಗುತ್ತದೆ. ಯುದ್ಧ ಸ್ಮಾರಕದ ಬಳಿ ಇರುವ ಜ್ಯೋತಿಯಲ್ಲೇ ಅಮರ ಜವಾನ್ ಜ್ಯೋತಿಯು ಉರಿಯಲಿದೆ ಎಂದು ಸ್ಪಷ್ಟಪಡಿಸಿವೆ.