ನವದೆಹಲಿ:ದೇಶದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪದಡಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ ಮೊಹಮ್ಮದರ ವಿರುದ್ಧ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿವಾದಿತ ಹೇಳಿಕೆಯನ್ನು ತಪ್ಪಾಗಿ ಬಿಂಬಿಸುವ ಜೊತೆಗೆ "ಬಿಜೆಪಿ ವಕ್ತಾರೆ ನೂಪುರ್ ಕೋಮುವಾದಿ" ಎಂದು ಪ್ರಚಾರ ಮಾಡಿದ್ದ ಮೊಹಮ್ಮದ್ ಜುಬೇರ್ ವಿರುದ್ಧ ದೂರು ದಾಖಲಾಗಿತ್ತು. ದೇಶದಲ್ಲಿ ಧಾರ್ಮಿಕ ಭಾವನೆ ಕೆರಳಿಸಿ, ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಿರುವ ಗಂಭೀರ ಆರೋಪ ಮೊಹಮ್ಮದ್ ಜುಬೇರ್ ಮೇಲಿದೆ.
ನೂಪುರ್ ಶರ್ಮಾ ವಿವಾದಿತ ಹೇಳಿಕೆ ತಿರುಚಿದ್ದ ಆರೋಪ ಮೊಹಮ್ಮದ್ ಜುಬೇರ್ ಮೇಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರೆ ಖುದ್ದಾಗಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ನಕಲಿ ವಿಡಿಯೋಗಳ ಮೂಲಕ ದೇಶದಲ್ಲಿ ಕೋಮು ಭಾವನೆಗಳನ್ನು ಪ್ರಚೋದಿಸಿ, ಸಾಮಾಜಿಕ ವಾತಾವರಣ ಹಾಳು ಮಾಡಲು ಮೊಹಮ್ಮದ್ ಮುಂದಾಗಿದ್ದಾರೆಂದು ನೂಪುರ್ ಶರ್ಮಾ ಆರೋಪಿಸಿದ್ದರು. ಜೊತೆಗೆ ತಮ್ಮ ಕುಟುಂಬಕ್ಕೆ ನಿರಂತರವಾಗಿ ಹತ್ಯೆಯ ಬೆದರಿಕೆ ಸಂದೇಶ ಬರುತ್ತಿವೆ ಎಂದೂ ತಿಳಿಸಿದ್ದರು.
ಇದನ್ನೂ ಓದಿ:ಭಾರತ-ಶ್ರೀಲಂಕಾ ವನಿತೆಯ ಟಿ20: ಅಂತಿಮ ಪಂದ್ಯದಲ್ಲಿ ಸೋಲು, ಸರಣಿ ಗೆದ್ದ ಕೌರ್ ಬಳಗ
ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 295A(ಧರ್ಮ ಅಥವಾ ಧಾರ್ಮಿಕ ನಂಬಿಕೆ ಅವಮಾನಿಸುವ ದುರುದ್ದೇಶಪೂರಿತ ಕೃತ್ಯ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.