ನವದೆಹಲಿ :ದೆಹಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಒಬ್ಬ ವ್ಯಕ್ತಿಯು ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ ಮೆಟ್ರೋ ರೈಲಿನ ಒಳಗೆ ಕುಡಿಯುವುದನ್ನು ಈಗಲೂ ನಿಷೇಧಿಸಲಾಗಿದೆ. "ದೆಹಲಿ ಮೆಟ್ರೋ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನ ನಿಬಂಧನೆಗಳಿಗೆ ಅನುಸಾರ ಪ್ರತಿ ವ್ಯಕ್ತಿಯು ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಮೆಟ್ರೋದಲ್ಲಿ ಸಾಗಿಸಲು ಅನುಮತಿಸಲಾಗಿದೆ" ಎಂದು ಡಿಎಂಆರ್‌ಸಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೆಹಲಿ ಮೆಟ್ರೋ, ಇತ್ತೀಚಿನವರೆಗೂ ಏರ್‌ಪೋರ್ಟ್ ಮೆಟ್ರೋ ಮಾರ್ಗವನ್ನು ಹೊರತುಪಡಿಸಿ ಎಲ್ಲಾ ಮಾರ್ಗಗಳಲ್ಲಿ ಮದ್ಯವನ್ನು ನಿಷೇಧಿಸಲಾಗಿತ್ತು. ಸಿಐಎಸ್‌ಎಫ್ ಮತ್ತು ಡಿಎಂಆರ್‌ಸಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಹಿಂದಿನ ಆ ಆದೇಶವನ್ನು ಪರಿಶೀಲಿಸಿದೆ ಎಂದು ಹೇಳಿದೆ. ಆದಾಗ್ಯೂ ಮೆಟ್ರೋ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
ಮೆಟ್ರೋ ಪ್ರಯಾಣಿಕರು ಮೆಟ್ರೊದಲ್ಲಿ ಸಭ್ಯತೆ ಕಾಪಾಡಿಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ ಯಾವುದೇ ಪ್ರಯಾಣಿಕರು ಮದ್ಯದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಯಾವುದೇ ರೀತಿಯ ಚೂಪಾದ ವಸ್ತುಗಳು, ಸ್ಫೋಟಕ ವಸ್ತುಗಳು, ಉಪಕರಣಗಳು, ಸುಡುವ ವಸ್ತುಗಳು, ರಾಸಾಯನಿಕಗಳು ಮತ್ತು ಇತರ ಅಪಾಯಕಾರಿ ವಸ್ತುಗಳು, ಬಂದೂಕುಗಳು ಇತರ ಆಕ್ರಮಣಕಾರಿ ವಸ್ತುಗಳನ್ನು ಮೆಟ್ರೊದಲ್ಲಿ ಸಾಗಿಸುವಂತಿಲ್ಲ. ಈ ವಸ್ತುಗಳನ್ನು ಮೆಟ್ರೊದ ನಿಷೇಧಿತ ವಸ್ತುಗಳ ಪಟ್ಟಿಗೆ ಸೇರಿಸಲಾಗಿದೆ.