ಶಿಯೋಹರ್: ಬಜೆಟ್ನಲ್ಲಿ ಬಿಹಾರದ ಶೋಹರ್ ಜಿಲ್ಲೆಯ ಸೀತಾಮರ್ಹಿ-ಬಾಪುಧಾಮ್ ಮೊತಿಹರಿ ರೈಲ್ವೆ ಯೋಜನೆಗೆ ಕೇವಲ 1ಸಾವಿರ ರೂ ನೀಡಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ವಿನೂತನ ರೀತಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಆರ್ಯನ್ ಚೌಹಾಣ್ ಎಂಬ ವ್ಯಕ್ತಿ, ತಮ್ಮ ಜಿಲ್ಲೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಈ ಪ್ರತಿಭಟನೆ ನಡೆಸಿದ್ದಾರೆ. ಬಜೆಟ್ನಲ್ಲಿ ಕೇವಲ 1000 ರೂ ನೀಡಿದ ಹಿನ್ನೆಲೆ ಸಚಿವರಿಗೆ ಒಂದು ಸಾವಿರ ರೂಪಾಯಿ ಚೆಕ್ ಕಳುಹಿಸುವ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಯೋಹರ್ ಜಿಲ್ಲೆಗೆ ಸಂಪರ್ಕಿಸುವ ಸೀತಾಮರ್ಹಿ-ಬಾಪುಧಾಮ್ ಮೊತಿಹರಿಯ 76 ಕಿ.ಮೀ ಉದ್ದದ ಈ ರೈಲ್ವೆ ಯೋಜನೆ ಅಂದಾಜು 204 ಕೋಟಿ ವೆಚ್ಚದ್ದಾಗಿದೆ. ಈ ಯೋಜನೆಗೆ ಕೇವಲ ಒಂದು ಸಾವಿರ ರೂ ಹಂಚಿಕೆ ಮಾಡಿದ್ದಕ್ಕೆ ಸ್ಥಳೀಯರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2007ರಲ್ಲಿ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಅವಧಿಯಲ್ಲಿ ಆರಂಭವಾದ ಪ್ರಾಜೆಕ್ಟ್ ಇದಾಗಿದೆ. ಈ ಯೋಜನೆಗೆ ಈ ಬಾರಿಯಾದರೂ ಉತ್ತಮ ಹಣ ನಿಗದಿ ಪಡಿಸಿ, ಮಂದಗತಿಯಲ್ಲಿ ಸಾಗುತ್ತಿದ್ದ ಕಾರ್ಯಕ್ಕೆ ಚುರುಕು ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಲ್ಲಿನ ಜನರ ನಿರೀಕ್ಷೆ ಈಗ ಹುಸಿಯಾಗಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಆರ್ಯನ್, ಇದು ಸಂಪೂರ್ಣವಾಗಿ ಅಪಹಾಸ್ಯಕ್ಕೀಡುಮಾಡುವ ಘಟನೆಯಾಗಿದೆ. ರೈಲ್ವೆ ಸಚಿವಾಲಯದ ತಾರತಮ್ಯ ಧೋರಣೆಯನ್ನು ನಾವು ಸಹಿಸುವುದಿಲ್ಲ. ಈ ಸಮಸ್ಯೆ ಬಗೆಹರಿಸಿ, ತಾರತಮ್ಯ ನಿವಾರಣೆ ಮಾಡದಿದ್ದರೆ, ಇಲ್ಲಿನ ಯುವಕರು ಬೃಹತ್ ಪ್ರತಿಭಟನೆಗೆ ಮುಂದಾಗುತ್ತಾರೆ. ಶಿಯೋಹರ್ ರೈಲ್ವೆ ಯೋಜನೆಗೆ ಇಷ್ಟು ಕಡಿಮೆ ಮೊತ್ತದ ಹಣ ಮಂಜೂರು ಮಾಡಿರುವುದು ಕೇಂದ್ರ ಸರ್ಕಾರದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಇದು ಮಹಾತ್ಮ ಗಾಂಧಿ ನಡೆದಾಡಿದ ಸ್ಥಳ. ಈ ರೈಲು ಯೋಜನೆಗೆ ಕೇವಲ 1000 ರೂಪಾಯಿಗಳನ್ನು ಒದಗಿಸುವ ಮೂಲಕ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಅವರಿಗೆ ಅವಮಾನಿಸಿದೆ ಎಂದು ಆರೋಪಿಸಿದರು.