ಆಗ್ರಾ (ಉತ್ತರ ಪ್ರದೇಶ):ಟೆಂಪೋ ಚಾಲಕನೋರ್ವ ಉತ್ತರ ಪ್ರದೇಶದ ಗೃಹರಕ್ಷಕ ದಳ ಮತ್ತು ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರ ಪುತ್ರ ಚಂದ್ರಮೋಹನ್ ಪ್ರಜಾಪತಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಚಿವರ ಪುತ್ರ ಆಗ್ರಾದ ಟ್ರಾನ್ಸ್ ಯಮುನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಚಿವ ಧರಂವೀರ್ ಅವರ ಪುತ್ರ ಚಂದ್ರಮೋಹನ್ ಅವರು ತಮ್ಮ ತಾಯಿ ರಾಜಕುಮಾರಿ ಅವರೊಂದಿಗೆ ಮಂಗಳವಾರ ಗಂಗಾ ದಸರಾದಂದು ಕಾರಿನಲ್ಲಿ ತಮ್ಮ ಗ್ರಾಮವಾದ ಹಾಜಿಪುರ ಖೇಡಾ ಖಂಡೌಲಿಗೆ ಬಂದಿದ್ದರು. ಇಲ್ಲಿಂದ ಆಗ್ರಾದ ಆವಾಸ್ ವಿಕಾಸ್ ಕಾಲೋನಿಯಲ್ಲಿರುವ ಮನೆಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಇದೇ ವೇಳೆ ಸಚಿವರ ಪುತ್ರನ ಕಾರಿಗೆ ಟೆಂಪೋ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಈ ಅಪಘಾತದಲ್ಲಿ ಚಂದ್ರಮೋಹನ್ ಮತ್ತು ತಾಯಿ ರಾಜಕುಮಾರಿ ಪ್ರಜಾಪತಿ ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಅಲ್ಲದೇ, ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ನಂತರ ಆರೋಪಿ ಚಾಲಕ ಟೆಂಪೋದೊಂದಿಗೆ ಓಡಿಹೋಗಲು ಯತ್ನಿಸಿದ್ದಾನೆ. ಇದಾದ ಬಳಿಕ ಚಂದ್ರಮೋಹನ ಟೆಂಪೋವನ್ನು ಹಿಂಬಾಲಿಸಿ ಹಿಡಿಯಲು ಪ್ರಯತ್ನಿಸಿದ್ದಾರೆ. ಟೆಂಪೋ ಹಿಂಬಾಲಿಸಿದ ನಂತರ ಚಾಲಕನ ಇಬ್ಬರು ಸ್ನೇಹಿತರು ಕೂಡ ಸ್ಥಳಕ್ಕೆ ಬಂದರು ಎಂದು ಸಚಿವರ ಪುತ್ರ ತಿಳಿಸಿದ್ದಾರೆ.
ಇಬ್ಬರು ಯುವಕರ ಕೈಯಲ್ಲಿ ಬಡಿಗೆಗಳು ಇದ್ದವು. ಇದಾದ ಬಳಿಕ ಟೆಂಪೋ ಚಾಲಕ ಸೇರಿದಂತೆ ಮೂವರೂ ಸುತ್ತಿಗೆಯಿಂದ ನನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದರು ಎಂದೂ ಚಂದ್ರಮೋಹನ್ ಪ್ರಜಾಪತಿ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಉಂಟಾದ ಗಲಾಟೆ ನಡುವೆಯೇ ಸ್ಥಳದಲ್ಲಿ ಅಪಾರ ಜನ ಜಮಾಯಿಸಿದ್ದರು. ಆಗ ಸಿಕ್ಕ ಸಮಯವನ್ನೇ ಸಾಧಿಸಿ ಟೆಂಪೋ ಚಾಲಕ ಆರೋಪಿಗಳ ಸಮೇತ ಪರಾರಿಯಾಗಿದ್ದಾನೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.