ಬೆಂಗಳೂರು : ವಿವಿಧ ಸಮುದಾಯಗಳ ನಡುವೆ ಧಾರ್ಮಿಕ ದ್ವೇಷವನ್ನು ಬಿತ್ತಿದ ಆರೋಪದ ಮೇಲೆ ಕೇಂದ್ರ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳದಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆ) ಅಡಿಯಲ್ಲಿ ಕೇಂದ್ರ ಸಚಿವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.
ಕೊಚ್ಚಿಯಲ್ಲಿ ನಡೆದ ಸ್ಫೋಟ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿ ಇಸ್ಲಾಮಿಕ್ ಗುಂಪು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಮಾಸ್ ನಾಯಕನ ವರ್ಚುವಲ್ ಭಾಷಣಕ್ಕೆ ಸಂಬಂಧಿಸಿದಂತೆ ಸಚಿವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೇರಳ ಪೊಲೀಸರ ಸೈಬರ್ ಸೆಲ್ ತನ್ನದೇ ಆದ ಎಫ್ಐಆರ್ ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಆರೋಪಿಸಿದ್ದರು. ಅಲ್ಲದೇ ಕೊಚ್ಚಿಯ ಕಲಮಸ್ಸೆರಿ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 12 ವರ್ಷದ ಬಾಲಕಿ ಸೇರಿದಂತೆ ಮೂವರು ಸಾವನ್ನಪ್ಪಿದ ಘಟನೆಯ ನಂತರ ಕೇಂದ್ರ ಸಚಿವರು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹೇಳಿಕೆ ನೀಡಿದ್ದು, ಇದಕ್ಕಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದರು. ನಂತರ ಸೋಮವಾರ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸಚಿವರು, ಸಿಎಂ ವಿಜಯನ್ ಉಗ್ರಗಾಮಿಗಳು ಮತ್ತು ಮೂಲಭೂತವಾದದ ಬಗ್ಗೆ ಮೃದು ನಿಲುವು ಹೊಂದಿದ್ದಾರೆ ಎಂದು ಆರೋಪಿಸಿದ್ದರು.