ಹೊಸದಿಲ್ಲಿ: ತೀವ್ರ ವಿವಾದದಲ್ಲಿ ಸಿಲುಕಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಜನವರಿ 22 ರಂದು ನಡೆಯಲಿರುವ ಡಬ್ಲ್ಯುಎಫ್‌ಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ರಾಜೀನಾಮೆ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಮಾಡಿರುವ ಭಾರತದ ಸ್ಟಾರ್ ಕುಸ್ತಿಪಟುಗಳು ಇಲ್ಲಿನ ಜಂತರ್ ಮಂತರ್‌ನಲ್ಲಿ ಬುಧವಾರದಿಂದ ಧರಣಿ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿ ಅವರು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಷ್ಟಾದರೂ ಬ್ರಿಜ್ ಭೂಷಣ್ ದಿಟ್ಟತನದಿಂದಲೇ ಮಾತನಾಡುತ್ತಿದ್ದು, ಕುಸ್ತಿಪಟುಗಳು ತನ್ನ ವಿರುದ್ಧ ಆರೋಪ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ಅದನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಸಂಸದರೂ ಆಗಿರುವ ಬ್ರಿಜ್ ಭೂಷಣ್ ಇಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಸ್ಪಷ್ಟೀಕರಣ ನೀಡಲಿದ್ದಾರೆ ಎನ್ನಲಾಗಿದೆ. ಬೇರೊಂದು ಮೂಲಗಳ ಪ್ರಕಾರ ಅವರು ತಮ್ಮ ಹುಟ್ಟೂರಾದ ಯುಪಿಯ ಗೊಂಡ್ ಜಿಲ್ಲೆಯ ನವಾಬ್‌ಗಂಜ್‌ನಲ್ಲಿರುವ ಕುಸ್ತಿಪಟುಗಳ ತರಬೇತಿ ಕೇಂದ್ರದಲ್ಲಿ ಸಂಜೆ 4 ಗಂಟೆಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.
ಕುಸ್ತಿಪಟುಗಳೊಂದಿಗೆ ಸಂಪರ್ಕ ಸಾಧಿಸಲು ಬ್ರಿಜ್ ಭೂಷಣ್ ಯತ್ನಿಸಿದರೂ ಅವರ ಮನವೊಲಿಕೆಗೆ ಬಗ್ಗದ ಕುಸ್ತಿಪಟುಗಳು, ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಸ್ಥಾನದಿಂದ ಬ್ರಿಜ್ ಭೂಷಣ್ ಪದಚ್ಯುತಿಗೆ ಪಟ್ಟು ಹಿಡಿದಿದ್ದಾರೆ. ಸಮಾಜದ ಹಲವಾರು ವಲಯದ ಸಂಘಟನೆಗಳು ಪ್ರತಿಭಟನಾ ನಿರತ ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವ ಕ್ರೀಡಾಪಟುಗಳಿಗೆ ಇದು ಉತ್ತಮ ವಾತಾವರಣವಾಗಿದೆಯಾ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನಿಸಿದೆ.