ಉನ್ನಾವೋ(ಉತ್ತರ ಪ್ರದೇಶ):ಜಿಲ್ಲೆಯ ಜೂನಿಯರ್ ಹೈಸ್ಕೂಲ್‌ವೊಂದರ 18 ವಿದ್ಯಾರ್ಥಿನಿಯರು ತಮ್ಮದೇ ಶಾಲೆಯ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದಾರೆ. ಶಿಕ್ಷಕನ ವಿರುದ್ಧ ದೂರು ಸಲ್ಲಿಸಿರುವ ಎಲ್ಲಾ ವಿದ್ಯಾರ್ಥಿನಿಯರು 7 ರಿಂದ 12 ವರ್ಷ ಒಳಗಿನವರು. ಇವರ ದೂರಿನ ಮೇರೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಶನಿವಾರ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಶಿಕ್ಷಕನ ವಿರುದ್ಧ ಪೊಲೀಸರು ಪೋಕ್ಸೊ ಸೇರಿದಂತೆ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಉನ್ನಾವೋದಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದ ಘಟನೆಯ ಕುರಿತು ಕೂಡಾ ಸಿಎಂಒದಿಂದ ಆಯೋಗ ಮಾಹಿತಿ ಕಲೆ ಹಾಕಿದೆ.
ಈ 18 ವಿದ್ಯಾರ್ಥಿನಿಯರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ, ತಮ್ಮ ಶಾಲೆಯ ಶಿಕ್ಷಕ ರಾಜೇಶ್ ಕುಮಾರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿ ಪತ್ರ ಬರೆದಿದ್ದರು. ಈ ದೂರಿನ ಆಧಾರದಡಿ ಆಯೋಗದ ಸದಸ್ಯೆ ಪ್ರೀತಿ ಭಾರದ್ವಾಜ್ ಇಂದು ಜೂನಿಯರ್ ಹೈಸ್ಕೂಲ್ಗೆ ತೆರಳಿ ಪರಿಶೀಲನೆ ನಡೆಸಿದರು. ಆಯೋಗದ ತಂಡದ ಸದಸ್ಯರು ಶಾಲೆಯಲ್ಲಿ 6 ಗಂಟೆಗಳ ಕಾಲ ಸಂಬಂಧಪಟ್ಟವರ ವಿಚಾರಣೆ ನಡೆಸಿದ್ದಾರೆ.
1ರಿಂದ 8ನೇ ತರಗತಿ ಓದುತ್ತಿರುವ ಬಾಲಕಿಯರಿಂದ ದೂರಿನ ಕುರಿತು ವಿವರವಾದ ಮಾಹಿತಿ ಪಡೆದಿದ್ದಾರೆ. ಆರೋಪಿ ಶಿಕ್ಷಕ ರಾಜೇಶ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ ನೀಡಲಾಗಿದೆ. ಪ್ರಕರಣದ ತನಿಖೆಯ ವೇಳೆ ಶಿಕ್ಷಕನ ವಿರುದ್ಧ ಆರೋಪಗಳು ಮತ್ತಷ್ಟು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಯುವತಿಗೆ ಕಿರುಕುಳ ಆರೋಪ: ದಲಿತ ಯುವಕನಿಗೆ ಥಳಿಸಿ, ಮೂತ್ರ ಕುಡಿಸಿ, ಹುಬ್ಬುಗಳ ಕಿತ್ತು ಕ್ರೌರ್ಯ