ಚೆನ್ನೈ: ಬೀದಿ ನಾಯಿಗಳನ್ನು ಕೊಂದ ಆರೋಪದ ಮೇಲೆ ತಮಿಳುನಾಡಿನ ವಿರುಧುನಗರ ಪೊಲೀಸರು ಶಂಕರಲಿಂಗಪುರದ ಪಂಚಾಯತ್ ಅಧ್ಯಕ್ಷೆ ಮತ್ತು ಅವರ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 50 ಬೀದಿ ನಾಯಿಗಳನ್ನು ಕೊಂದು ಹೂತು ಹಾಕಲಾಗಿದೆ ಎಂದು ಪ್ರಾಣಿದಯಾ ಕಾರ್ಯಕರ್ತರೊಬ್ಬರು ಅಮತೂರ್ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ.
50 ನಾಯಿಗಳನ್ನು ಕೊಂದು ಹೂಳಲಾಗಿದೆ ಎಂದು ಮೇನಕಾ ಗಾಂಧಿ ಸ್ಥಾಪಿಸಿದ ಪ್ರಾಣಿ ಹಕ್ಕುಗಳ ಸಂಘಟನೆಯಾದ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಸದಸ್ಯೆಯಾಗಿರುವ ಸಿ. ಸುನಿತಾ ಎಂಬುವರು ದೂರು ನೀಡಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸುನಿತಾ, ಪಂಚಾಯತ್ ಅಧ್ಯಕ್ಷೆ ನಾಗಲಕ್ಷ್ಮಿ ಮತ್ತು ಅವರ ಪತಿ ಮೀನಾಚಿ ಸುಂದರಂ ಅವರು ನಾಯಿಗಳನ್ನು ಕೊಂದಿದ್ದಾರೆ ಎಂಬುದಕ್ಕೆ ಪುರಾವೆ ಸಿಕ್ಕಿದ ಮೇಲೆ ನಾನು ಅವರಿಗೆ ಕರೆ ಮಾಡಿ ವಿಚಾರಿಸಿದ್ದೆ. ನಾಯಿಗಳನ್ನು ತಾವೇ ಕೊಂದಿರುವುದಾಗಿ ಸುಂದರಂ ಹೇಳಿಕೊಂಡಿದ್ದಾರೆ ಎಂದು ಹೇಳಿದರು.