ಹೈದರಾಬಾದ್: ಕಾಲೇಜಿನಲ್ಲಿ ಸಹಪಾಠಿ ವಿದ್ಯಾರ್ಥಿಯೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಪುತ್ರನ ವಿರುದ್ಧ ದುಂಡಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನ ಉಪನಗರದಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಸಹ ವಿದ್ಯಾರ್ಥಿಯ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಅಪೆಕ್ಸ್ ಸಂಯೋಜಕ ಸುಕೇಶ್ ಅವರ ದೂರಿನ ಮೇರೆಗೆ ದುಂಡಿಗಲ್ ಪೊಲೀಸರು ಸೆಕ್ಷನ್ 341, 323, 504, 506, ಇತ್ಯಾದಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿಶ್ವವಿದ್ಯಾಲಯದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್ ರಮಣ ರೆಡ್ಡಿ ತಿಳಿಸಿದ್ದಾರೆ. ಮಂಗಳವಾರ ಹಲ್ಲೆಗೊಳಗಾದ ವಿದ್ಯಾರ್ಥಿಯ ಸೆಲ್ಫಿ ವಿಡಿಯೋ ಕೂಡ ಬೆಳಕಿಗೆ ಬಂದಿದೆ. ಆದರೆ ತನ್ನ ತಪ್ಪಿನಿಂದಲೇ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಹೇಳಿರುವುದು ಗಮನಾರ್ಹ.
ಬಿಜೆಪಿ ಅಧ್ಯಕ್ಷರ ಪುತ್ರ, ಎಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿ, ಇಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಯ ತರಗತಿಯಲ್ಲಿ ಸಹ ವಿದ್ಯಾರ್ಥಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಈತ ತನ್ನ ಸಹಪಾಠಿಗಳ ಸಹೋದರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದನೆಂದು ವರದಿಯಾಗಿದೆ. ಘಟನೆಯ ವೀಡಿಯೋದಲ್ಲಿ ವಿದ್ಯಾರ್ಥಿಗಳು ಪರಸ್ಪರ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.
ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು ಆಡಳಿತಾರೂಢ ಬಿಆರ್‌ಎಸ್ ವೈರಲ್ ವಿಡಿಯೋವನ್ನು ಬಳಸಿಕೊಂಡಿದೆ ಎನ್ನಲಾಗಿದೆ. ಬಿಆರ್‌ಎಸ್ ಕಾರ್ಯಕರ್ತರು ವಿವಾದಾತ್ಮಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡಿದ್ದಾರೆ. "ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರ ಮಗ ಆಕ್ಷನ್ ಸ್ಪ್ರಿ ಯಲ್ಲಿದ್ದಂತೆ ತೋರುತ್ತಿದೆ!" ಎಂದು ಟ್ವಿಟರ್ನಲ್ಲಿ ಬರೆದಿರುವ ತೆಲಂಗಾಣ ರಾಜ್ಯ ಖನಿಜ ನಿಗಮದ (ಟಿಎಸ್‌ಎಂಡಿಸಿ) ಅಧ್ಯಕ್ಷ ಕ್ರಿಶನ್ ಇದರ ಜೊತೆ ಬಂಡಿ ಭಗೀರಥ ಇತರ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುತ್ತಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಷಡ್ಯಂತ್ರ ಎಂದ ಬಂಡಿ ಸಂಜಯ್: ತಮ್ಮ ಪುತ್ರ ಸಹವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆಯ ಬಗ್ಗೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಪ್ರತಿಕ್ರಿಯಿಸಿದ್ದು, ಈ ಪ್ರಕರಣವು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ ಮತ್ತು ಯುವಕರನ್ನು ರಾಜಕೀಯ ಆಟಗಳ ಮಧ್ಯೆ ಎಳೆದು ತರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳು ಜಗಳವಾಡುತ್ತಾರೆ ಹಾಗೂ ಮತ್ತೆ ಒಂದಾಗುತ್ತಾರೆ. ಹುಡುಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಧ್ಯಪ್ರವೇಶಿಸಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವ ಹಕ್ಕು ಕೆಸಿಆರ್‌ಗೆ ಕೊಟ್ಟವರು ಯಾರು.? ಇದೊಂದು ಷಡ್ಯಂತ್ರ. ನಾನೇ ನನ್ನ ಮಗನನ್ನು ಪೊಲೀಸರಿಗೆ ಒಪ್ಪಿಸುತ್ತೇನೆ. ಅವರು ಅವನ ಮೇಲೆ ಥರ್ಡ್ ಡಿಗ್ರಿ ಪ್ರಯೋಗಿಸಲಿ ಅಥವಾ ಲಾಠಿಯಿಂದ ಹೊಡೆಯಲಿ. ಮೂವರು ಯುವಕರ ಮೇಲೆ ಅನಾವಶ್ಯಕವಾಗಿ ಕೇಸು ದಾಖಲಿಸುವ ಮೂಲಕ ಅವರ ವಿದ್ಯಾರ್ಥಿ ಜೀವನವನ್ನು ಹಾಳುಗೆಡವಲಾಗಿದೆ ಎಂದರು.
ಇದನ್ನೂ ಓದಿ: ಮದುವೆ ವಯಸ್ಸಿಗೆ ಬಂದಿದ್ದ ಹೆಣ್ಮಕ್ಕಳಿಬ್ಬರ ಜೊತೆ ತಾಯಿ ಆತ್ಮಹತ್ಯೆಗೆ ಶರಣು!