ಕರ್ನಾಟಕ

karnataka

ETV Bharat / bharat

ಮಹಿಳಾ ಕಾನ್ಸ್​ಟೇಬಲ್​ ಮೇಲಿನ ದೌರ್ಜನ್ಯ ಪ್ರಕರಣ: ತಡರಾತ್ರಿ ವಿಚಾರಣೆಗೆ ಒಳಪಡಿಸಿದ ಅಲಹಾಬಾದ್ ಹೈಕೋರ್ಟ್ - ಭಾನುವಾರ ತಡರಾತ್ರಿ ವಿಚಾರಣೆ

ರೈಲುವೊಂದರಲ್ಲಿ ನಡೆದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಮೇಲಿನ ದೌರ್ಜನ್ಯ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಒಳಪಡಿಸಿದೆ. ಭಾನುವಾರ ತಡರಾತ್ರಿ ಈ ಬಗ್ಗೆ ವಿಚಾರಣೆ ಕೂಡ ನಡೆಸಿತು.

ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್

By ETV Bharat Karnataka Team

Published : Sep 4, 2023, 7:28 PM IST

ಪ್ರಯಾಗ್‌ರಾಜ್ (ಉತ್ತರ ಪ್ರದೇಶ):ಅಯೋಧ್ಯೆಯ ಸರಯು ಎಕ್ಸ್‌ಪ್ರೆಸ್ ರೈಲಿನಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್​ ಮೇಲಿನ ದೌರ್ಜನ್ಯ ಪ್ರಕರಣ ಬಹಳ ನೋವಿನ ಸಂಗತಿ ಎಂದು ಅಲಹಾಬಾದ್ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ. ಈ ಬಗ್ಗೆ ವಾಟ್ಸಪ್​ ಮೂಲಕ ಬಂದ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಸ್ವೀಕರಿಸಿದ ಹೈಕೋರ್ಟ್, ವಿಶೇಷ ಎಂಬಂತೆ ಭಾನುವಾರ ತಡರಾತ್ರಿ ವಿಚಾರಣೆ ಕೂಡ ನಡೆಸಿ ಔದಾರ್ಯಕ್ಕೆ ಸಾಕ್ಷಿಯಾಯಿತು.

ಮುಖ್ಯ ನ್ಯಾಯಮೂರ್ತಿ ಪ್ರಿತಿಂಕರ್ ದಿವಾಕರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠ ಈ ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿಗಳ ನಿವಾಸದಲ್ಲಿ ನಡೆದ ವಿಚಾರಣೆ ಬಳಿಕ ವಿಶೇಷ ಪೀಠವು, ಈ ವಿಷಯದಲ್ಲಿ ರೈಲ್ವೆ ಮತ್ತು ರಾಜ್ಯ ಸರ್ಕಾರದಿಂದ ಉತ್ತರವನ್ನು ಕೇಳಿದೆ. ಅಲ್ಗದೇ ಸೋಮವಾರ ಮಧ್ಯಾಹ್ನದವರೆಗೆ ಈ ಪ್ರಕರಣದ ಬಗ್ಗೆ ಇದುವರೆಗೆ ತೆಗೆದುಕೊಂಡ ಪ್ರತಿಯೊಂದು ಕ್ರಮಗಳ ವಿವರಗಳನ್ನು ಸಹ ನ್ಯಾಯಾಲಯವು ನೀಡಿದೆ.

ತನಿಖೆಗಾಗಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ವಿಚಾರಣೆ ವೇಳೆ ಹಾಜರಾಗುವಂತೆ ನ್ಯಾಯಾಲಯವು ಸೂಚಿಸಿದೆ. ಈ ಬಗ್ಗೆ ಈವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಅಧಿಕಾರಿಯೇ ಹೇಳಬೇಕು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಸರ್ಕಾರ ಹೇಳಬೇಕಾಗಿದೆ. ರೈಲ್ವೆ ಪರವಾಗಿ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರಿಗೆ ಹಾಜರಾಗುವಂತೆಯೂ ಸೂಚಿಸಲಾಗಿದೆ.

ಭಾನುವಾರ ರಾತ್ರಿ ವಿಚಾರಣೆ ವೇಳೆ ನ್ಯಾಯಾಲಯವು ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯಲ್, ಸರ್ಕಾರಿ ವಕೀಲ ಎಕೆ ಸ್ಯಾಂಡ್, ಎಜಿಎ ಜೆಕೆ ಉಪಾಧ್ಯಾಯ ಮತ್ತು ಹೆಚ್ಚುವರಿ ಮುಖ್ಯ ಸ್ಥಾಯಿ ವಕೀಲ ಪ್ರಿಯಾಂಕಾ ಮಿದ್ಧ ಅವರನ್ನು ಕರೆದಿತ್ತು.

ನಡೆದ ಘಟನೆ ಏನು: ಕಳೆದ ಮೂರು ದಿನಗಳ ಹಿಂದೆ, ಸರಯು ಎಕ್ಸ್‌ಪ್ರೆಸ್‌ನಲ್ಲಿ ಮಹಿಳಾ ಕಾನ್ಸ್​ಟೇಬಲ್ ಮೇಲೆ ಅಮಾನವೀಯ ಕೃತ್ಯ ನಡೆದಿದೆ. ಘಟನೆಯಲ್ಲಿ ಮಹಿಳಾ ಕಾನ್ಸ್​ಟೇಬಲ್ ರಕ್ತದ ನಡುವೆ ಅರೆಬೆತ್ತಲೆಯಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗಂಭೀರವಾದ ಸ್ಥಿತಿಯಲ್ಲಿದ್ದ ಅವರನ್ನು ಚಿಕಿತ್ಸೆಗಾಗಿ ತಕ್ಷಣ ಲಕ್ನೋದ ಕೆಜಿಎಂಯುಗೆ ಕಳುಹಿಸಲಾಗಿತ್ತು. ಸದ್ಯ ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು, ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಮೂಲತಃ ಸುಲ್ತಾನ್‌ಪುರದಲ್ಲಿ ನಿವಾಸಿಯಾಗಿರುವ ಮಹಿಳಾ ಕಾನ್ಸ್‌ಟೇಬಲ್‌, ಅಯೋಧ್ಯೆಯ ಸಾವನ್‌ ಜಾತ್ರೆಯಲ್ಲಿ ಕರ್ತವ್ಯದ ಹಿನ್ನೆಲೆ ಹಾಜರಾಗಿದ್ದರು.

ಸಂತ್ರಸ್ತ ಮಹಿಳಾ ಪೊಲೀಸ್​ ಕಾನ್ಸ್​ಟೇಬಲ್ ಮೇಲೆ ಅತ್ಯಾಚಾರ ನಡೆದಿರುವ ಶಂಕೆಯೂ ಇದೆ. ಮಂಕಾಪುರ ಮತ್ತು ಅಯೋಧ್ಯೆ ರೈಲು ನಿಲ್ದಾಣದ ನಡುವೆ ಸಂಚರಿಸುವ ರೈಲಿನಲ್ಲಿ ಈ ಘಟನೆ ನಡೆದಿರಬಹುದು ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ವಕೀಲ ರಾಮ್ ಕುಮಾರ್ ಕೌಶಿಕ್ ಅವರು ಈ ವಿಷಯದ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವನ್ನು ನೀಡಿದ್ದು, ಇದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಸ್ವೀಕರಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ:Live in relation: ಕಾಲಕ್ಕೆ ತಕ್ಕಂತೆ ಸಹಜೀವನ ಸಂಗಾತಿ ಬದಲಿಸುವುದು ಸಮಾಜಕ್ಕೆ ಮಾರಕ; ಅಲಹಾಬಾದ್​ ಹೈಕೋರ್ಟ್​

ABOUT THE AUTHOR

...view details