ಲಖನೌ: ವಕೀಲರಿಗೆ ಕಪ್ಪು ಕೋಟ್ ಮತ್ತು ನಿಲುವಂಗಿಯ ಡ್ರೆಸ್ ಕೋಡ್ ನಿಷೇಧಿಸಬೇಕೆಂಬ ವಿಚಾರವಾಗಿ ಅಲಹಾಬಾದ್ ಹೈಕೋರ್ಟ್, ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ನೋಟಿಸ್ ನೀಡಿದೆ. ಆಗಸ್ಟ್ 18 ರೊಳಗೆ ಈ ಕುರಿತು ಲಖನೌ ನ್ಯಾಯಪೀಠ ಮತ್ತು ಹೈಕೋರ್ಟ್ಗೆ ತಮ್ಮ ಅಭಿಪ್ರಾಯ ತಿಳಿಸುವಂತೆ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅಜಯ್ ಕುಮಾರ್ ಶ್ರೀ ವಾಸ್ತವ ಅವರಿದ್ದ ವಿಭಾಗೀಯ ಪೀಠವು ಬಿಸಿಐಗೆ ನೋಟಿಸ್ ನೀಡಿತು. ಅರ್ಜಿದಾರರು, ಬಿಸಿಐ ನಿಯಮಗಳ 1975 ರ ನಾಲ್ಕನೇ ಅಧ್ಯಾಯದ ನಿಬಂಧನೆಗಳನ್ನು ಪ್ರಶ್ನಿಸಿದ್ದಾರೆ. ಇದು ವಕೀಲರ ಕಾಯ್ದೆ 1961 ರ ಸೆಕ್ಷನ್ 49 (ಐ) (ಜಿಜಿ) ಅಡಿಯಲ್ಲಿ ರೂಪಿಸಲ್ಪಟ್ಟಿದ್ದು, ಸಂವಿಧಾನದ ನಿಯಮಗಳನ್ನು ಮೀರಿದೆ ಎಂದು ಆರೋಪಿಸಿದ್ದಾರೆ. ಸೆಕ್ಷನ್ 14, 21 ಮತ್ತು 25 ನೇ ವಿಧಿಗಳನ್ನು ಬಿಸಿಐ ಉಲ್ಲಂಘಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ನ್ಯಾಯಪೀಠದ ಮುಂದೆ ವಾದಿಸಿದ ಅರ್ಜಿದಾರರು, ಕೋಟ್ ಮತ್ತು ನಿಲುವಂಗಿಯನ್ನು ಧರಿಸಿ ಮತ್ತು ಕುತ್ತಿಗೆಗೆ ಬ್ಯಾಂಡ್ ಕಟ್ಟುವ ಪ್ರಸ್ತುತ ಡ್ರೆಸ್ ಕೋಡ್ ದೇಶದ ಹವಾಮಾನ ಸ್ಥಿತಿಗೆ ಸೂಕ್ತವಲ್ಲ ಎಂದು ಒತ್ತಿ ಹೇಳಿದರು. ಪ್ರಸ್ತುತ ಇರುವ ಡ್ರೆಸ್ ಕೋಡ್ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಸಂಕೇತವಾಗಿದೆ.