ನವದೆಹಲಿ:'ಅಲ್ಲಾ' ಮತ್ತು 'ಓಂ' ಒಂದೇ ಹೇಳುವ ಮೂಲಕ ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ವಿವಾದ ಸೃಷ್ಟಿಸಿದ್ದಾರೆ. ಇದೇ ವೇಳೆ ದೇಶದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸುಮಾರು 1,400 ವರ್ಷಗಳಿಂದ ಸಹೋದರರಂತೆ ವಾಸಿಸುತ್ತಿದ್ದಾರೆ ಎಂದು ಮದನಿ ಹೇಳಿದ್ದಾರೆ.
ದೆಹಲಿಯ ಜಮಿಯತ್ ಉಲಮಾ-ಐ-ಹಿಂದ್‌ನ 34ನೇ ಅಧಿವೇಶನದಲ್ಲಿ ಮದನಿ, ಮನು ಕುರಿತಾಗಿ ಮಾತನಾಡುತ್ತಾ ವಿವಾದಿತ ಹೇಳಿಕೆ ನೀಡಿದ್ದಾರೆ. ಶ್ರೀರಾಮ, ಬ್ರಹ್ಮ ಅಥವಾ ಶಿವ ಸೇರಿದಂತೆ ಯಾರೂ ಇಲ್ಲದಿದ್ದಾಗ ಮನು ಯಾರನ್ನು ಪೂಜಿಸುತ್ತಿದ್ದರು ಎಂದು ನಾನು ಅನೇಕ ದೊಡ್ಡ ಧರ್ಮ ಗುರುಗಳ ಬಳಿ ಕೇಳಿದ್ದೇನೆ. ಆಗ ಕೆಲವರು ಶಿವನನ್ನು ಮನು ಪೂಜಿಸುತ್ತಿದ್ದರು ಎಂದು ಹೇಳಿದರು. ಆದರೆ, ಹಲವು ಧರ್ಮ ಗುರುಗಳು 'ಓಂ' ಅನ್ನು ಪೂಜಿಸುತ್ತಿದ್ದರು ಎಂದು ತಿಳಿಸಿದರು. ನಂತರ ನಾನು ಓಂ ಎಂದರೆ ಏನು ಅಂತಾ ಕೇಳಿದೆ. ಇದಕ್ಕೆ ಓಂ ಎಂದರೆ ಗಾಳಿ. ಅದಕ್ಕೆ ಯಾವ ರೂಪ ಮತ್ತು ಬಣ್ಣ ಇಲ್ಲ. ಜಗತ್ತಿನ ಎಲ್ಲೆಡೆ ಕೂಡ ಇರುತ್ತದೆ ಎಂದು ಆ ಧರ್ಮ ಗುರುಗಳು ನನಗೆ ತಿಳಿಸಿದರು ಎಂಬುದಾಗಿ ಮದನಿ ವಿವರಿಸಿದ್ದಾರೆ.
ಮುಂದುವರೆದು ಮಾತನಾಡಿದ ಮದನಿ, ಇದೇ ಗಾಳಿಯನ್ನೇ ನಾವು ಕೂಡ 'ಅಲ್ಲಾ' ಎಂದು ಉಲ್ಲೇಖಿಸುತ್ತೇವೆ. ಇದಕ್ಕೆ ನೀವು (ಹಿಂದೂಗಳು) ಈಶ್ವರ ಎಂದು ಕರೆಯುತ್ತೀರಿ. ನಾವು ಸಹ ಇದನ್ನೇ ಅಲ್ಲಾ ಎಂದು ಕರೆಯುತ್ತೇವೆ. ಜೊತೆಗೆ ಪಾರ್ಸಿ ಮಾತನಾಡುವವರು ಖುದಾ ಎಂದು ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ದೇವರು ಎಂದು ಕರೆಯುತ್ತಾರೆ. ಇದರರ್ಥ 'ಓಂ' ಮತ್ತು 'ಅಲ್ಲಾ' ಎರಡೂ ಒಂದೇ. ಜೊತೆಗೆ ಇದೇ ಮನು ಪೂಜಿಸುತ್ತಿದ್ದ ಏಕೈಕ ವಿಷಯವಾಗಿದ್ದು, ಒಂದೇ ಓಂ ಮತ್ತು ಅಲ್ಲಾನನ್ನು ಪೂಜಿಸಲಾಗುತ್ತದೆ. ಇದೇ ನಮ್ಮ ನೆಲದ ಶಕ್ತಿ ಎಂದು ಹೇಳಿದ್ದಾರೆ.