ಫ್ಲೋರಿಡಾ (ಅಮೆರಿಕ):ಯುನೈಟೆಡ್ ಸ್ಟೇಟ್ಸ್‌ನಲ್ಲಿ ಶಾಲಾ ವಯಸ್ಸಿನ ಮಕ್ಕಳು ಮತ್ತು ಹದಿಹರೆಯದವರಲ್ಲಿ ಯಾವಾಗಲೂ ಆತಂಕ ಹಾಗೂ ಖಿನ್ನತೆಗೆ ಒಳಗಾಗುತ್ತಲೇ ಇರುತ್ತಾರೆ. ವಿಷಾದಕರ ವಿಷಯ ಏನೆಂದರೆ, 2021ರಲ್ಲಿ ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯವನ್ನು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಘೋಷಿಸಲಾಗಿತ್ತು. ಮಾನಸಿಕ ಆರೋಗ್ಯದಲ್ಲಿನ ಈ ಕುಸಿತಕ್ಕೆ ವಿವಿಧ ಕಾರಣಗಳು ಇವೆ. ಮಕ್ಕಳ ಬೆಳವಣಿಗೆಯಲ್ಲಿ ಸ್ವತಂತ್ರ ''ಮಕ್ಕಳ ಆಟ'' ಪ್ರಮುಖವಾಗಿದೆ ಎಂದು ಹೊಸ ಅಧ್ಯಯನವು ತಿಳಿಸಿದೆ.
ಜರ್ನಲ್ ಆಫ್ ಪೀಡಿಯಾಟ್ರಿಕ್ಸ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಪ್ರಕಾರ, ವಯಸ್ಕರ ನೇರ ಮೇಲ್ವಿಚಾರಣೆ ಮತ್ತು ನಿಯಂತ್ರಣದಿಂದ ಸ್ವತಂತ್ರವಾಗಿ ಆಟವಾಡಲು, ತಿರುಗಾಡಲು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ದಶಕಗಳಿಂದೀಚೆಗೆ ಮಕ್ಕಳು ಮತ್ತು ಹದಿಹರೆಯದವರು ಸ್ವತಂತ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸಹ ತೀವ್ರ ಇಳಿಮುಖಗೊಂಡಿದೆ, ಇದು ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಹೆಚ್ಚಳಕ್ಕೆ ಕಾರಣವೂ ಆಗಿದೆ ಎಂಬುದನ್ನು ಸೂಚಿಸುತ್ತದೆ. ಮಕ್ಕಳು ಮತ್ತು ಹದಿಹರೆಯದವರಿಗೆ ಮಾರ್ಗದರ್ಶನ ಸಿಗುತ್ತಿಲ್ಲ. ಮಾನಸಿಕ ಆರೋಗ್ಯಕ್ಕೆ ಅಗತ್ಯವಾದ ಸ್ವಾತಂತ್ರ್ಯವೂ ಇಲ್ಲದಿರುವುದು ಈ ಖಿನ್ನತೆಗೆ ಕಾರಣ ಎಂದು ಅಧ್ಯಯನ ತಿಳಿಸಿದೆ.
ಡೇವಿಡ್ ಎಫ್ ಜೋರ್ಕ್‌ಲಂಡ್ ಹೇಳಿದ್ದೇನು?:"ಪಾಲಕರು ಇಂದು ಮೇಲ್ವಿಚಾರಣೆ ಮಾಡದ ಮಕ್ಕಳಿಗೆ ಸಂಭವಿಸಬಹುದಾದ ಅಪಾಯಗಳ ಬಗ್ಗೆ ಯೋಚಿಸಬೇಕು. ಶಾಲೆಯಲ್ಲಿ ಪ್ರಗತಿಯ ಸಾಧನೆಯ ಬಗ್ಗೆ ಮೌಲ್ಯ ಮಾಪನ ನಿಯಮಿತವಾಗಿ ನಡೆಯಬೇಕು. ಮಕ್ಕಳು ಉತ್ತಮವಾಗಿ ಹೊಂದಿಕೊಂಡು ಬೆಳೆಯಬೇಕಾದರೆ, ಅವರಿಗೆ ನಿರಂತರವಾಗಿ ಹೆಚ್ಚುತ್ತಿರುವ ಅವಕಾಶಗಳನ್ನು ಒದಗಿಸಬೇಕಾಗುತ್ತದೆ. ಸ್ವಯಂ ನಿರ್ದೇಶನದ ಆಟ ಮತ್ತು ಕುಟುಂಬ, ಸಮುದಾಯ ಜೀವನ ಒಳಗೊಂಡಂತೆ ಸ್ವತಂತ್ರ ಚಟುವಟಿಕೆ ಹೊಂದಬೇಕಾಗುತ್ತದೆ. ವಿಶ್ವಾಸಾರ್ಹ, ಜವಾಬ್ದಾರಿ ನಿಭಾಯಿಸಲು ಸಮರ್ಥರಾಗಿರಬೇಕಾಗುತ್ತದೆ. ಅವರು ಶಾಲೆಯ ಜಗತ್ತನ್ನು ಮಾತ್ರವಲ್ಲದೇ ನೈಜ ಪ್ರಪಂಚದೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸುವ ಮನೋಭಾವ ಬೆಳೆಸಿಕೊಳ್ಳಬೇಕಾಗುತ್ತದೆ ಎಂದು ಫ್ಲೋರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯದ ಚಾರ್ಲ್ಸ್ ಇ ಸ್ಮಿತ್ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಸೈಕಾಲಜಿ ವಿಭಾಗದ ಪ್ರಾಧ್ಯಾಪಕ, ಲೇಖಕ ಡೇವಿಡ್ ಎಫ್ ಜೋರ್ಕ್‌ಲಂಡ್ ಹೇಳಿದರು.
ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು:ಮಕ್ಕಳು ಹಾಗೂ ವಯಸ್ಕರು ಕೆಲವು ಅಪಾಯ ಹಾಗೂ ವೈಯಕ್ತಿಕ ಜವಾಬ್ದಾರಿ ಒಳಗೊಂಡಿರುವ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಈ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸ್ವಾತಂತ್ರ್ಯವು ದಶಕಗಳಿಂದ ಕುಸಿದಿದೆ ಎಂದು ಅಧ್ಯಯನವು ಹೇಳಿದೆ. ಎತ್ತರವಾದ ಮರ ಏರುವಂತಹ ಅಪಾಯಕಾರಿ ಆಟವು ಮಕ್ಕಳನ್ನು ಫೋಬಿಯಾದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಭವಿಷ್ಯದ ಆತಂಕವನ್ನು ಕಡಿಮೆ ಮಾಡಲು ಸಾಧ್ಯಗುತ್ತದೆ. ಆದರೆ ಇಂದು ಅವೆಲ್ಲ ಕಡಿಮೆ ಆಗಿದೆ. ಈ ಬಗ್ಗೆ ಗಮನ ಹರಿಸಬೇಕಿದೆ.