ಹೈದರಾಬಾದ್:ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ, ಸಡಗರಕ್ಕೆ ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಎಂದ ತಕ್ಷಣ ಎಲ್ಲರಲ್ಲೂ ಒಂದು ರೀತಿಯ ಪುಳಕ ಅದೇನೋ ಸಂಭ್ರಮ. ನರಕ ಚತುರ್ದಶಿಯಿಂದ ಆರಂಭವಾಗುವ ಈ ಹಬ್ಬವನ್ನು ಗೋ ಪೂಜೆ, ಲಕ್ಷ್ಮಿಪೂಜೆ ಸೇರಿದಂತೆ ವಿಶೇಷ ಆಚರಣೆಗಳ ಮೂಲಕ ಸಂಭ್ರಮಿಸಲಾಗುತ್ತದೆ. ದೀಪಾವಳಿ ಹಬ್ಬದಲ್ಲಿ ಲಕ್ಷ್ಮಿದೇವಿ ಸಿರಿ-ಸಂಪತ್ತನ್ನು ತಂದುಕೊಡುವಳು ಎನ್ನುವ ನಂಬಿಕೆಯಿದೆ. ಅದರಲ್ಲಿಯೂ ಧನತ್ರಯೋದಶಿಯಂತು ಎಲ್ಲರಿಗೂ ಶುಭವನ್ನು ತಂದುಕೊಡುತ್ತದೆ.
ದೀಪಾವಳಿ ಸಂದರ್ಭದಲ್ಲಿ ಕುಬೇರನ ಹಬ್ಬ ಧನತ್ರಯೋದಶಿಯನ್ನು ಆಚರಿಸಲಾಗುತ್ತದೆ. ಇದು ಐದು ದಿನಗಳ ದೀಪಾವಳಿಯ ಹಬ್ಬದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಇದೇ ಶುಕ್ರವಾರ ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಈ ವರ್ಷ ಧನತ್ರಯೋದಶಿಯು ಶುಭ ಸಮಯ ಸಂಜೆ 5.32 ರಿಂದ ಸಂಜೆ 5.59 ರವರೆಗೆ ಇರಲಿದ್ದು, ಕೇವಲ 27 ನಿಮಿಷಗಳ ಈ ಶುಭ ಸಮಯದಲ್ಲಿ ಪೂಜಿಸುವುದನ್ನು ಫಲಪ್ರದವೆಂದು ಪರಿಗಣಿಸಲಾಗುತ್ತದೆ.
ಧನತ್ರಯೋದಶಿಯನ್ನು ಧನತೇರಸ್ ಎಂತಲೂ ಸಹ ಕರೆಯುತ್ತಾರೆ. ಈ ದಿನ ವ್ಯಾಪಾರಿಗಳು ತಿಜೋರಿಯನ್ನು ಪೂಜಿಸುತ್ತಾರೆ. ಲೆಕ್ಕದ ಖಾತೆ-ಕಿರ್ದಿಗಳನ್ನು ಈ ದಿನವೇ ತರುತ್ತಾರೆ.