ಮುಂಬೈ: ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳಿಂದ ಜಮೀನು ಖರೀದಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾಡಿರುವ ಆರೋಪವನ್ನು ಮಹಾರಾಷ್ಟ್ರ ಸಚಿವ, ಎನ್ಸಿಪಿ ನಾಯಕ ನವಾಬ್ ಮಲಿಕ್ ತಳ್ಳಿಹಾಕಿದ್ದು, ನಮ್ಮ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿಯೇ ನಡೆದಿವೆ ಎಂದಿದ್ದಾರೆ.
ತಮ್ಮ ವಿರುದ್ಧ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಫಡ್ನವೀಸ್ ಹೇಳಿಕೆಗೆ ತಿರುಗೇಟು ನೀಡಿರುವ ಮಲಿಕ್, ಭೂಗತ ಜಗತ್ತಿನೊಂದಿಗೆ ನಂಟು ಹೊಂದಿರುವ ಅಥವಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಪರಾಧಿಯಾಗಿರುವ ಯಾರಿಂದಲೂ ಯಾವುದೇ ಆಸ್ತಿ ಖರೀದಿಸಿಲ್ಲ. ಭೂಗತ ಲೋಕ ಮತ್ತು ಬಾಂಬ್ ಸ್ಫೋಟದ ಅಪರಾಧಿಗಳೊಂದಿಗೆ ನನ್ನ ಹೆಸರನ್ನು ತಳಕು ಹಾಕಲು ಪ್ರಯತ್ನಿಸುವ ಮೂಲಕ ಫಡ್ನವಿಸ್ ತನ್ನ ಇಮೇಜ್ಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ಇಬ್ಬರು ಅಪರಾಧಿಗಳಿಂದ ನವಾಬ್ ಮಲಿಕ್ ಮತ್ತು ಅವರ ಕುಟುಂಬ ಸದಸ್ಯರ ಕಂಪನಿಯು ಉಪನಗರ ಕುರ್ಲಾದಲ್ಲಿ ಅತ್ಯಂತ ಅಗ್ಗದ ದರದಲ್ಲಿ ಭೂಮಿಯನ್ನು ಖರೀದಿಸಿದೆ. ಮಲಿಕ್ ಮತ್ತು ಅವರ ಕುಟುಂಬ ಸದಸ್ಯರು ಭೂಗತ ಜಗತ್ತಿನೊಂದಿಗೆ ಸಂಬಂಧ ಹೊಂದಿರುವ ಜನರೊಂದಿಗೆ ಭೂ ವ್ಯವಹಾರಗಳನ್ನು ಮಾಡಿಕೊಂಡಿದ್ದಾರೆ ಎಂದು ಫಡ್ನವೀಸ್ ಹೊಸ ಬಾಂಬ್ ಸಿಡಿಸಿದ್ದರು.