ಕಚ್(ಗುಜರಾತ್): ಅತ್ಯಂತ ತೀವ್ರವಾದ ಬಿಪರ್‌ಜೋಯ್ ಚಂಡಮಾರುತ ಜೂನ್ 15ರಂದು ಗುಜರಾತ್ನ ಜಖೌ ಬಂದರಿನ ಬಳಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಚಂಡಮಾರುತದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಪರಿಶೀಲನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹತ್ವದ ಸಭೆ ನಡೆಸಿದರು. ಎನ್‌ಡಿಆರ್‌ಎಫ್ ಬೋಟ್, ಟ್ರೀ-ಕಟರ್ ಮತ್ತು ಟೆಲಿಕಾಂ ಉಪಕರಣಗಳನ್ನು ಒಳಗೊಂಡ 12 ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, 15 ತಂಡಗಳನ್ನು ಸ್ಟ್ಯಾಂಡ್‌ಬೈ ಆಗಿ ಇರಿಸಲಾಗಿದೆ ಎಂದು ಪ್ರಧಾನಿಯವರ ಕಾರ್ಯಾಲಯ ತಿಳಿಸಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 7,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಚ್-ಸೌರಾಷ್ಟ್ರ ಜಿಲ್ಲೆಗಳ ಕರಾವಳಿಯಿಂದ 10 ಕಿಲೋಮೀಟರ್ ದೂರದಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಮಂಗಳವಾರದಿಂದ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡಲಾಚೆಯ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಕಚ್, ದೇವಭೂಮಿ ದ್ವಾರಕಾ, ಪೋರಬಂದರ್, ಜಾಮ್‌ನಗರ, ರಾಜ್‌ಕೋಟ್, ಜುನಾಗಢ್ ಮತ್ತು ಮೊರ್ಬಿ ಸೇರಿದಂತೆ ಜಿಲ್ಲೆಗಳಿಂದ ಸೌರಾಷ್ಟ್ರ ಮತ್ತು ಕಚ್‌ನ ಕರಾವಳಿ ಪ್ರದೇಶಗಳಿಂದ ಸ್ಥಳಾಂತರಿಸುವಿಕೆಯನ್ನು ಸಜ್ಜುಗೊಳಿಸಲು ಕೇಂದ್ರವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬಿಪರ್‌ಜೋಯ್ ಚಂಡಮಾರುತವು ಗುಜರಾತ್‌ನತ್ತ ಸಾಗುತ್ತಿದ್ದು, ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಪ್ಪಿಸಲು, ಕಚ್‌ನ ಜಾಖೋವ್ ಬಂದರಿನಿಂದ 430 ಕಿಮೀ ದೂರದಲ್ಲಿರುವ ಕಾಂಡ್ಲಾ ಬಂದರಿನಿಂದ, ಕರಾವಳಿಯ ಗ್ರಾಮಗಳ 7,000 ಜನರನ್ನು ಸ್ಥಳಾಂತರಿಸಲಾಗಿದೆ. ಕಾಂಡ್ಲಾ ಬಂದರಿನಲ್ಲಿ ದೋಣಿ ಸಂಚಾರವನ್ನು ನಿಲ್ಲಿಸಲಾಗಿದೆ. ಕರಾವಳಿ ಭಾಗದ ಗ್ರಾಮಗಳಲ್ಲಿ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ಪೊಲೀಸರು ಹಾಗೂ ಆಡಳಿತ ಮಂಡಳಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮೈಕ್ ಮೂಲಕ ಘೋಷಣೆ ಮಾಡುತ್ತಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ. ಎಷ್ಟೋ ಜನರು ತಮ್ಮದೇ ಆದ ರೀತಿಯಲ್ಲಿ ಸ್ಥಳಾಂತರಗೊಳ್ಳುತ್ತಿದ್ದಾರೆ.
ಅಂಜಾರ್, ಭಚೌ ಮತ್ತು ಗಾಂಧಿಧಾಮ್ ತಾಲೂಕಿನ ನದಿಪಾತ್ರದ ಜನರನ್ನು ಬಸ್ ಮೂಲಕ ಅವರ ಸ್ಥಳೀಯ ಸ್ಥಳಗಳಿಗೆ ಕಳುಹಿಸಲು ಮತ್ತು ಕಾಂಡ್ಲಾ ಬಂದರಿನ ಮೂಲಕ ಇತರರನ್ನು ಅವರ ತಾಯ್ನಾಡಿಗೆ ವರ್ಗಾಯಿಸಲು ಆಡಳಿತವು ಅಭಿಯಾನವನ್ನು ಪ್ರಾರಂಭಿಸಿದೆ. ಕಾಂಡ್ಲಾ ಮರೈನ್ ಠಾಣೆಯ ಪಿಐ ಹಿನಾಬೆನ್ ಹುಂಬಳ್ ಅವರು ಖಾರಿ ರೋಹರ್, ಮೀಥಿ ರೋಹರ್, ನಾನಿ ಚಿರೈ, ಟ್ಯೂನ, ವಂದಿ, ಭರಾಪರ್, ಕಿಡಾನ, ಮೀನುಗಾರರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.