ಕರ್ನಾಟಕ

karnataka

ETV Bharat / bharat

ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: ಸರ್ವಪಕ್ಷ ಸಭೆ, ಸುಗಮ ಕಲಾಪಕ್ಕೆ ಸರ್ಕಾರದ ಮನವಿ - ಸಂಸದೆ ಮಹುವಾ ಮೊಯಿತ್ರಾ

All party meeting on Parliaments Winter session: ಡಿಸೆಂಬರ್ 4ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಇಂದು ಸರ್ವಪಕ್ಷ ಸಭೆ ಜರುಗಿತು. ಸುಗಮ ಕಲಾಪಕ್ಕೆ ಸರ್ಕಾರವು ಪ್ರತಿಪಕ್ಷಗಳಿಗೆ ಮನವಿ ಮಾಡಿದೆ.

Etv Bharat
Etv Bharat

By ETV Bharat Karnataka Team

Published : Dec 2, 2023, 6:14 PM IST

ನವದೆಹಲಿ:ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಲಿದೆ. ಈ ಕುರಿತು ಇಂದು ಚರ್ಚಿಸಲು ಸರ್ವಪಕ್ಷ ಸಭೆ ನಡೆಯಿತು. ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆ ಬಳಿಕ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಚನಾತ್ಮಕ ಚರ್ಚೆಗೆ ಸರ್ಕಾರ ಸಂಪೂರ್ಣವಾಗಿ ಸಿದ್ಧವಾಗಿದ್ದು, ಸದನ ಸುಗಮವಾಗಿ ಕಲಾಪ ನಡೆಯಲು ಸಹಕರಿಸಬೇಕೆಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಂಸದ ಮಹುವಾ ಮಜಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.

ಸಂಸತ್ತಿನ ಚಳಿಗಾಲದ ಅಧಿವೇಶನವು ಡಿಸೆಂಬರ್ 4ರಂದು ಪ್ರಾರಂಭವಾಗಲಿದ್ದು, ಡಿಸೆಂಬರ್ 22ರವರೆಗೆ ನಡೆಯಲಿದೆ. 15 ದಿನಗಳ ಕಾಲ ಕಲಾಪ ಜರುಗಲಿದೆ. ಈ ಬಾರಿ ಅಧಿವೇಶನದಲ್ಲಿ ಹಳೆಯ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ಹೊಸ ಮಸೂದೆಗಳು ಸೇರಿದಂತೆ ಪ್ರಮುಖ ಮಸೂದೆಗಳನ್ನು ಮಂಡಿಸುವ ಹಾಗೂ ಅಂಗೀಕರಿಸುವ ನಿರೀಕ್ಷೆಯಿದೆ.

ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಆರೋಪ ಸಂಬಂಧ ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲು ಶಿಫಾರಸು ಮಾಡಿದ ಲೋಕಸಭೆಯ ಸಮಿತಿಯ ವರದಿಯನ್ನು ಅಧಿವೇಶನದ ಮೊದಲ ದಿನವಾದ ಸೋಮವಾರ ಸದನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದೀಯ ಪಕ್ಷದ ನಾಯಕರಾದ ಅಧೀರ್ ರಂಜನ್ ಚೌಧರಿ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಮಹುವಾ ಪ್ರಕರಣದಲ್ಲಿ ಸಮಿತಿ ಶಿಫಾರಸು ಮಾಡಿದ ಶಿಕ್ಷೆಯು ವ್ಯಾಪಕವಾದ ಪರಿಣಾಮಗಳನ್ನು ಹೊಂದಿರುವ ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಹೇಳಿದ್ದಾರೆ.

ಸಭೆ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜೋಶಿ, ಇಂದಿನ ಸರ್ವಪಕ್ಷ ಸಭೆಯಲ್ಲಿ 23 ಪಕ್ಷಗಳ 30 ನಾಯಕರು ಪಾಲ್ಗೊಂಡಿದ್ದರು. ನಮಗೆ ಹಲವು ಸಲಹೆಗಳು ಬಂದಿವೆ. ನಾವು 19 ವಿಧೇಯಕಗಳನ್ನು ತರುತ್ತಿದ್ದು, ಇದರಲ್ಲಿ ಎರಡು ಹಣಕಾಸು ವಿಧೇಯಕಗಳು, ಗೃಹ ಸಚಿವಾಲಯದ ಮೂರು ವಿಧೇಯಕಗಳು, ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿವೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಫಲಪ್ರದ ಚರ್ಚೆಗಳನ್ನು ನಡೆಸಲು ಸರ್ಕಾರ ಉತ್ಸುಕವಾಗಿದೆ. ಪಕ್ಷಗಳು ರಚನಾತ್ಮಕ ಚರ್ಚೆಯ ವಿಧಾನವ ಅನುಸರಿಸಬೇಕು. ನಾವು ಉಭಯ ಸದನಗಳಲ್ಲಿ ಶೂನ್ಯ ವೇಳೆಯನ್ನು ಬಹುತೇಕ ನಿಯಮಿತವಾಗಿ ನಡೆಸುತ್ತೇವೆ. ನಾವು ಅಲ್ಪಾವಧಿಯ ಚರ್ಚೆಗಳನ್ನು ಸಹ ನಡೆಸುತ್ತೇವೆ. ಇದು 17ನೇ ಲೋಕಸಭೆಯ ಕೊನೆಯ ಅಧಿವೇಶನ. ಆದ್ದರಿಂದ ರಚನಾತ್ಮಕ ಚರ್ಚೆ ನಡೆಯಬೇಕು. ಸದನವು ಸುಗಮವಾಗಿ ನಡೆಯಬೇಕು ಎಂಬುದು ನಮ್ಮ ವಿನಂತಿ ಎಂದರು. ಇದೇ ವೇಳೆ, ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಶಿಫಾರಸು ಕುರಿತು ಪ್ರತಿಕ್ರಿಯಿಸಿದ ಅವರು, ಸದನವು ಸಮಿತಿಯ ಈ ಹಿಂದಿನ ನಿದರ್ಶನವನ್ನು ಅನುಸರಿಸುತ್ತದೆ. ಈ ವಿಷಯದ ಬಗ್ಗೆ ಸದನದಲ್ಲಿ ಸ್ಪೀಕರ್ ನಿರ್ಧರಿಸುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್​ಗೆ ಜಯ ಸಿಗಲಿದೆ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

ABOUT THE AUTHOR

...view details