ನವದೆಹಲಿ: ಕಾಂಗ್ರೆಸ್ ನಾಯಕ, ಜಮ್ಮು-ಕಾಶ್ಮೀರ ಮಾಜಿ ಸಿಎಂ ಗುಲಾಮ್ ನಬಿ ಆಜಾದ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹೊಗಳಿದ ಆಜಾದ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪ್ರಧಾನಿ ಮೋದಿ ಅವರನ್ನು ಹೊಗಳಿದ ಆಜಾದ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಜಾದ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆ-ಕೆ ಕಾಂಗ್ರೆಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಶಾನವಾಜ್ ಚೌಧರಿ ನೇತೃತ್ವದಲ್ಲಿ ಜಮ್ಮು- ಕಾಶ್ಮೀರದ ಪ್ರೆಸ್ ಕ್ಲಬ್ನ ಹೊರ ಭಾಗದಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮೋದಿ ಅವರನ್ನು ಹೊಗಳಿದ್ದ ಗುಲಾಂ ನಬಿ ಆಜಾದ್ ಅವರ ಪ್ರತಿಕೃತಿಯನ್ನು ದಹಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
'ಈಟಿವಿ ಭಾರತ'ದ ಜೊತೆ ಮಾತನಾಡಿದ ಜಮ್ಮು- ಕಾಶ್ಮೀರ ಕಾಂಗ್ರೆಸ್ ಉಸ್ತುವಾರಿ ರಜನಿ ಪಾಟೀಲ್, ಆಜಾದ್ ಅವರ ಹೇಳಿಕೆಯ ಕುರಿತು ನನಗೆ ತಿಳಿದಿಲ್ಲ. ಒಂದು ವೇಳೆ, ಆಜಾದ್ ಅವರು ಮೋದಿಯನ್ನು ಹೊಗಳಿದರೆ ಪಕ್ಷದ ಕಾರ್ಯಕರ್ತರಿಗೆ ಸಹಜವಾಗಿಯೇ ಬೇಸರವಾಗುತ್ತದೆ. ಯಾಕೆಂದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿದಿನ ಬಿಜೆಪಿಯ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪಕ್ಷಕ್ಕಾಗಿ ಹೆಚ್ಚು ಶ್ರಮಿಸುತ್ತಿದ್ದಾರೆ. ಆದ್ದರಿಂದ ನಮ್ಮದೇ ನಾಯಕರು ಪ್ರಧಾನಿ ಮೋದಿಯವರನ್ನು ಹೊಗಳಿದಾಗ ಸಹಜವಾಗಿಯೇ ದುಃಖ ಉಂಟಾಗುತ್ತದೆ ಎಂದರು.