ನವದೆಹಲಿ: ಜೆಎನ್‌ಯು ದೇಶದ್ರೋಹ ಪ್ರಕರಣ ಸಂಬಂಧ ಮಾಜಿ ಸಿಪಿಐ ಮುಖಂಡ ಕನ್ಹಯ್ಯ ಕುಮಾರ್ ಮತ್ತು ಇತರ ಆರೋಪಿಗಳಿಗೆ ಚಾರ್ಜ್‌ಶೀಟ್ ಮತ್ತು ಸಂಬಂಧಿತ ದಾಖಲೆಗಳನ್ನು ನೀಡುವಂತೆ ಪಟಿಯಾಲ ನ್ಯಾಯಾಲಯ ದೆಹಲಿ ಪೊಲೀಸರಿಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 7 ರಂದು ನಡೆಯಲಿದೆ.
ಇದನ್ನು ಓದಿ: 6 ತಿಂಗಳ ತನಕ ನಮ್ಮ ಹೋರಾಟವನ್ನು ಮೊಟಕುಗೊಳಿಸೋಣ; ಸದನದಲ್ಲಿ ಸಿಎಂ ಭರವಸೆ ಬಳಿಕ ಯತ್ನಾಳ್ ಮನವಿ
ಮಾಜಿ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಪರ ಹಾಜರಾದ ವಕೀಲ ಸುಶೀಲ್ ಬಜಾಜ್, ಕನ್ಹಯ್ಯ ಕುಮಾರ ಅವರಿಗೆ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಕುಮಾರ್ ಅವರ ಸಾಮಾಜಿಕ ಕೆಲಸಗಳನ್ನು ಪರಿಗಣಿಸಿ ಅವರಿಗೆ ವಿಚಾರಣೆಯಿಂದ ವಿನಾಯಿತಿ ನೀಡಿ ಎಂದು ಬೇಡಿಕೊಂಡರು. ವಕೀಲರ ಮನವಿ ಆಲಿಸಿದ ನ್ಯಾಯಾಲಯ, ಈ ಬಗ್ಗೆ ನಂತರ ವಿಚಾರ ಮಾಡುವುದಾಗಿ ತಿಳಿಸಿತು.
ವಿಚಾರಣೆಯ ಸಂದರ್ಭದಲ್ಲಿ ಉಮರ್ ಖಾಲಿದ್ರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ಇನ್ನುಳಿದ ಆರೋಪಿಗಳಾದ ಆಕಿಬ್, ಮುಜೀಬ್, ಉಮರ ಗುಲ್, ರಯೀಸ್ ರಸೂಲ್, ಬಶಾರತ್ ಅಲಿ, ಖಾಲಿದ್ ಬಶೀರ್ ಅವರ ಪರವಾಗಿ ಹಾಜರಾದ ವಕೀಲ ವಾರಿಶಾ ಫರಾಸತ್, ಆರೋಪಿಗಳಿಗೆ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದರು. ಅರ್ಜಿ ಮಾನ್ಯ ಮಾಡಿದ ನ್ಯಾಯಾಲಯ ಈ ಏಳು ಜನರಿಗೆ ಜಾಮೀನು ನೀಡಿತು.
ಪ್ರಕರಣದ ಪ್ರಮುಖ ಆರೋಪಿಗಳಾದ ಕನ್ಹಯ್ಯ ಕುಮಾರ, ಉಮರ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಇವರಿಗೆ ನ್ಯಾಯಾಲಯದಿಂದ ಈ ಮುನ್ನವೇ ಜಾಮೀನು ಸಿಕ್ಕಿತ್ತು.