ಅಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಗರಗಳ ಹೆಸರನ್ನು ಬದಲಿಸುವ ಪರಿಪಾಠ ಮುಂದುವರೆದಿದೆ. ಇದೀಗ ಅಲಿಗಢಕ್ಕೆ ಹರಿಗಢ ಎಂದು ಮರು ನಾಮಕರಣ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮಂಗಳವಾರ ನಡೆದ ಮಹಾನಗರ ಪಾಲಿಕೆಯ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ಅಲಿಗಢ ಹೆಸರನ್ನು ಹರಿಗಢ ಎಂದು ಬದಲಾಯಿಸುವ ಪ್ರಸ್ತಾವನೆ ಅಂಗೀಕರಿಸಲಾಗಿದೆ.
2017ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಗರಗಳ ಹೆಸರು ಬದಲಾವಣೆ ರೂಢಿ ಶುರುವಾಗಿದೆ. ಪಾಲಿಕೆ ಸಭೆಯಲ್ಲಿ ಅಲಿಗಢವನ್ನು ಹರಿಗಢ್ ಆಗಿ ಬದಲಿಸುವ ಪ್ರಸ್ತಾವನೆಯನ್ನು ಕೌನ್ಸಿಲರ್ ಸಂಜಯ್ ಪಂಡಿತ್ ಮಂಡಿಸಿದ್ದರು. ಎಲ್ಲ ಕೌನ್ಸಿಲರ್ಗಳ ಸರ್ವಾನುಮತದಿಂದ ಈ ಪ್ರಸ್ತಾವನೆ ಅಂಗೀಕಾರವಾಗಿದೆ. ಇದನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದರೆ, ಅದು ಉತ್ತರ ಪ್ರದೇಶದ ಸಚಿವ ಸಂಪುಟದ ಮುಂದೆ ಬರಲಿದೆ. ಸಚಿವ ಸಂಪುಟ ಕೂಡ ಒಪ್ಪಿಗೆ ಸೂಚಿಸಿದರೆ ಗೆಜೆಟ್ ಪಾಸ್ ಆಗಲಿದೆ.
ಈ ಹಿಂದಿನಿಂದಲೂ ಅಲಿಗಢ ಹೆಸರು ಬದಲಿಸುವ ವಿಷಯ ಚರ್ಚೆಯಲ್ಲಿದೆ. 2021ರ ಆಗಸ್ಟ್ನಲ್ಲೇ ಜಿಲ್ಲಾ ಪಂಚಾಯಿತಿಯಲ್ಲಿ ಹರಿಗಢ ಎಂದು ನಾಮಕರಣ ಮಾಡುವ ಪ್ರಸ್ತಾವನೆ ಅಂಗೀಕಾರವಾಗಿದೆ. ಈ ಪ್ರಸ್ತಾವನೆಯೂ ಸರ್ವಾನುಮತದಿಂದ ಅಂಗೀಕಾರವಾಗಿತ್ತು. ಸದಸ್ಯರಾದ ಕೆಹ್ರಿ ಸಿಂಗ್ ಮತ್ತು ಉಮೇಶ್ ಯಾದವ್ ಮಂಡಿಸಿದ್ದ ಈ ಪ್ರಸ್ತಾವನೆ ಅಂಗೀಕರಿಸಿ, ಸರ್ಕಾರಕ್ಕೆ ರವಾನಿಸಲಾಗಿದೆ. ಇದು ಇದನ್ನೂ ಸರ್ಕಾರದ ಹಂತದಲ್ಲೇ ಬಾಕಿ ಉಳಿದಿದೆ.
ಸ್ವಾಮಿ ಹರಿದಾಸರ ಜನ್ಮಸ್ಥಳ: ಅಲಿಗಢದಲ್ಲಿ ಆಧ್ಯಾತ್ಮಿಕ ಕವಿ ಸ್ವಾಮಿ ಹರಿದಾಸರ ಜನ್ಮಸ್ಥಳ ಇದೆ. ಮಥುರಾದಲ್ಲಿ ನೆಲೆಸಿದ್ದ ಅವರ ಹೆಸರಲ್ಲಿ ಅಲಿಗಢದಲ್ಲಿ ಹರಿದಾಸಪುರ ಎಂಬ ಗ್ರಾಮವೂ ಇದೆ. ಖೇರೇಶ್ವರ ಧಾಮದಲ್ಲಿ ಸ್ವಾಮಿ ಹರಿದಾಸರ ಪತ್ನಿಯ ಸ್ಮಾರಕ ನಿರ್ಮಿಸಲಾಗಿದೆ. ಇದಕ್ಕಾಗಿಯೇ ಅಲಿಗಢವನ್ನು ಹರಿಗಢ ಎಂದು ಹೆಸರಿಸಲಾಗುತ್ತಿದೆ.