ಜಾರ್ಖಂಡ್ :ಪಾಚಿಯು ಅತ್ಯಂತ ಸರಳವಾದ ಒಂದು ಸಸ್ಯವಾಗಿದ್ದು, ಇದು ಸಾಮಾನ್ಯವಾಗಿ ಪೌಷ್ಟಿಕಾಂಶ ಮತ್ತು ನೀರನ್ನು ಎಲೆಗಳಿಂದ ಹೀರಿಕೊಳ್ಳುತ್ತದೆ. ಕೊಳಗಳು, ಜಲಾಶಯಗಳು ಹಾಗೂ ನದಿಗಳಲ್ಲಿ ಹೆಚ್ಚಾಗಿ ಕಂಡು ಬರುವ ಪಾಚಿಗಳಲ್ಲಿ ನಾನಾ ವಿಧಗಳಿವೆ.
ಕೆಲವು ವಿಧದ ಪಾಚಿಗಳು ಹಾನಿಕಾರಕವಾಗಿದ್ದರೆ, ಕೆಲ ಪಾಚಿಗಳನ್ನು ಆಹಾರ, ಔಷಧಿ ಮತ್ತು ಕೃಷಿಯಲ್ಲಿ ಬಳಸಬಹುದಾಗಿದೆ. ಆದ್ದರಿಂದ ಜಾರ್ಖಂಡ್ನ ಕೇಂದ್ರ ಗಣಿಗಾರಿಕೆ ಮತ್ತು ಇಂಧನ ಸಂಶೋಧನಾ ವಿಜ್ಞಾನಿಗಳು, ಪಾಚಿಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಲು ಚಿಂತನೆ ನಡೆಸಿದ್ದಾರೆ.
ಪಾಚಿಗಳಲ್ಲಿ ಪ್ರೋಟಿನ್, ಕಾರ್ಬೋಹೈಡ್ರೇಟ್ಗಳು ಮತ್ತು ಜೀವಸತ್ವಗಳು ಸೇರಿದಂತೆ ಅನೇಕ ಪೋಷಕಾಂಶಗಳು ಇರುತ್ತವೆ. ಆದ್ದರಿಂದ ಸಿಐಎಂಎಫ್‌ಆರ್‌ನ ವಿಜ್ಞಾನಿಗಳು, ಪಾಚಿಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ.
ಪಾಚಿಗಳಿಂದ ಆಹಾರ ಉತ್ಪನ್ನ ತಯಾರಿಸಲು ಸಂಶೋಧನೆ ಪಾಚಿಗಳಿಂದ ಮಾನವನ ದೇಹಕ್ಕೆ ಹಾನಿಯಾಗುವ ಯಾವುದೇ ವಸ್ತುಗಳು ಇದ್ದರೆ ಅದನ್ನು ಬೇರ್ಪಡಿಸಲಾಗುತ್ತದೆ. ನಂತರ ಪೌಷ್ಟಿಕ ಅಂಶಗಳನ್ನು ಹೊರ ತೆಗೆದು ಆಹಾರವನ್ನು ತಯಾರಿಸಲಾಗುತ್ತದೆ. ಈ ಆಹಾರವನ್ನು ಕ್ಯಾಪ್ಸೂಲ್ ಅಥವಾ ಪುಡಿ ರೂಪದಲ್ಲಿ ತಯಾರಿಸಲಾಗುತ್ತದೆ. ಇದರಿಂದ ಅದನ್ನು ಜನರಿಗೆ ಸುಲಭವಾಗಿ ತಲುಪಿಸಬಹುದಾಗಿದೆ.
ಪಾಚಿಗಳಿಂದ ತಯಾರಿಸಿದ ಆಹಾರಗಳು ಸಂಪೂರ್ಣವಾಗಿ ಸಸ್ಯಾಹಾರಿಗಳಾಗಿರುತ್ತವೆ. ಇದರೊಂದಿಗೆ ಆಹಾರದ ವೆಚ್ಚವನ್ನು ತುಂಬಾ ಕಡಿಮೆ ಇಡಲಾಗುವುದರಿಂದ ಬಡ ವರ್ಗದ ಜನರು ಸಹ ಬಳಸಬಹುದು. ವಿಜ್ಞಾನಿಗಳ ಪ್ರಕಾರ ಇದು ಅಪೌಷ್ಟಿಕತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೂ ಕೃಷಿಕರಿಗೆ ಪಾಚಿ ಉತ್ಪಾದನೆಯ ಬಗ್ಗೆ ತರಬೇತಿ ನೀಡಲಾಗುವುದು. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
ಪಾಚಿಗಳನ್ನು ಪ್ರಸ್ತುತ ಚೀನಾ, ಜಪಾನ್, ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ಆಹಾರ ಪದಾರ್ಥವಾಗಿ ಬಳಸಲಾಗುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಯಲ್ಲಿ ಆಹಾರ ಸಮಸ್ಯೆ ಪರಿಹರಿಸಲು ಇಂತಹ ಪ್ರಯೋಗಗಳು ಅವಶ್ಯಕ. ಈ ಪ್ರಯೋಗ ಯಶಸ್ವಿಯಾದರೆ, ಪಾಚಿಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಲಾಗುವುದು. ಇದು ಪೌಷ್ಟಿಕಾಂಶ ಹೆಚ್ಚಿಸುತ್ತದೆ ಮತ್ತು ಆಹಾರದ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ...