ಪಲಾಮು (ಜಾರ್ಖಂಡ್): ಜಾನುವಾರುಗಳಲ್ಲಿ ಹರಡುತ್ತಿರುವ ಮಾರಣಾಂತಿಕ ಲಂಪಿ ವೈರಸ್‌ನ ಭೀತಿ ಇದೀಗ ಜಿಂಕೆಗಳಿಗೂ ಕಾಡುತ್ತಿದೆ. ರಾಜಸ್ಥಾನದಲ್ಲಿ ಜಿಂಕೆಗಳಲ್ಲಿ ಚರ್ಮ ಗಂಟು ರೋಗ ಹರಡಿರುವ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಜಾರ್ಖಂಡ್ನ ಪಲಾಮು ಹುಲಿ ಸಂರಕ್ಷಿತ ಪ್ರದೇಶದ ಜಿಂಕೆಗಳು ಕೂಡ ದೀರ್ಘಕಾಲದ ವೈರಸ್‌ನ ಅಪಾಯಕ್ಕೆ ಸಿಲುಕಿವೆ.
ಲಂಪಿ ವೈರಸ್‌ನ ಭೀತಿ ಹಿನ್ನೆಲೆಯಲ್ಲೇ ಪಲಾಮು ಟೈಗರ್ ರಿಸರ್ವ್ (ಪಿಟಿಆರ್) ಮ್ಯಾನೇಜ್‌ಮೆಂಟ್ ಅರಣ್ಯ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿದೆ. ಜಿಂಕೆಗಳಲ್ಲಿ ಲಂಪಿ ವೈರಸ್ ಹರಡಿದ ಕಾರಣ ಸ್ಥಳೀಯ ಗ್ರಾಮಸ್ಥರೊಂದಿಗೆ ಸಭೆ ನಡೆಸಲಾಗಿದೆ. ಜಾನುವಾರುಗಳನ್ನು ಕಾಡಿಗೆ ಕೊಂಡೊಯ್ಯದಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ ಎಂದು ಪಲಾಮು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಕುಮಾರ್ ಅಶುತೋಷ್ ತಿಳಿಸಿದ್ದಾರೆ.
ಜೊತೆಗೆ ವಿವಿಧ ಪ್ರದೇಶಗಳಲ್ಲಿ ಗ್ರಾಮಸ್ಥರೊಂದಿಗೂ ಸಭೆ ನಡೆಸಲು ಸಹ ಯೋಜಿಸಲಾಗಿದೆ. ಜಿಂಕೆಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ. ವಿವಿಧ ಹಂತದ ಇಲಾಖೆಯ ಸಿಬ್ಬಂದಿಗೆ ವಿಸ್ತೃತವಾದ ಮಾದರಿ ಕಾರ್ಯವಿಧಾನ (ಎಸ್‌ಒಪಿ)ದ ಮಾಹಿತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಲಂಪಿ ವೈರಸ್ ಹಾವಳಿ: ಜಾನುವಾರು ಜಾತ್ರೆ ನಿರ್ಬಂಧಿಸಿದ ಸರ್ಕಾರ
ಪಿಟಿಆರ್ ಪಕ್ಕದ ಪ್ರದೇಶಗಳಲ್ಲಿ ಲಂಪಿ ವೈರಸ್ ಪತ್ತೆ: ಪಲಾಮು ಹುಲಿ ಸಂರಕ್ಷಿತ ಪ್ರದೇಶದಲ್ಲಿ 250ಕ್ಕೂ ಹೆಚ್ಚು ನೀರಿನ ಮೂಲಗಳಿವೆ. ಇದನ್ನು ಜಿಂಕೆ ಸೇರಿದಂತೆ ಇತರ ವನ್ಯಜೀವಿಗಳು ಬಳಸುತ್ತವೆ. ಐದು ಸಾವಿರಕ್ಕೂ ಹೆಚ್ಚು ಜಿಂಕೆಗಳಿವೆ. ಜಾನುವಾರುಗಳು ಸಹ ಈ ನೀರಿನ ಮೂಲವನ್ನು ಬಳಸುತ್ತಿದ್ದು, ಇದರಿಂದ ಸೋಂಕು ಹರಡುವ ಭೀತಿ ಎದುರಾಗಿದೆ ಎಂದು ಅಶುತೋಷ್ ಕಳವಳ ವ್ಯಕ್ತಪಡಿಸಿದ್ದಾರೆ.